ಹಾವೇರಿ: ನಟ ಪುನೀತ್ ರಾಜ್ಕುಮಾರ್ ಅವರು ನಮ್ಮೊಂದಿಗಿಲ್ಲ ಎಂದು ಅನಿಸುತ್ತಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಅಬಲೂರು ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪುನೀತ್ ರಾಜ್ಕುಮಾರ್ ಇದ್ದಾಗಲೇ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಗಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಈ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದರೆ ಒಕ್ಕೊರಲಿನಿಂದ ಸಮ್ಮತಿಸುತ್ತೇವೆ. ಪುನೀತ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಸಿಎಂ ಜತೆ ಸೇರಿ ಒತ್ತಾಯ ಮಾಡುತ್ತೇವೆ ಎಂದರು.
ಬಿಟ್ ಕಾಯಿನ್ ವಿಚಾರವಾಗಿ ಪ್ರತಿಕ್ರಿಯಿಸಿ, ಕಾನೂನಿನ ಮುಂದೆ ಎಲ್ಲರೂ ಒಂದೇ. ಬಿಟ್ ಕಾಯಿನ್ ಬಗ್ಗೆ ನನಗೆ ಗೊತ್ತಿಲ್ಲ. ಅದು ಅಕ್ರಮನೋ, ಸಕ್ರಮನೋ ಎಂದು ಗೊತ್ತಿಲ್ಲ. ಅಕ್ರಮ ಎಂದಾದರೆ ಅದರಲ್ಲಿ ಭಾಗಿಯಾದವರು ಯಾರೇ ಆದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ಸಚಿವ ಆನಂದ ಸಿಂಗ್:
ಪುನೀತ್ಗೆ ಪದ್ಮಶ್ರೀ ಸಿಗಬೇಕು ಎನ್ನುವದು ನಮ್ಮ ಆಶಾಭಾವನೆ ಎಂದು ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಪುನೀತ್ ಅವರು ನನಗೆ 2000ನೇ ಇಸ್ವಿಯಿಂದ ಪರಿಚಿತರಾಗಿದ್ದರು. ನಾನಾಗ ರಾಜಕಾರಣಿ ಆಗಿರ್ಲಿಲ್ಲ. ಆಗ ನಾನೊಬ್ಬ ಸಮಾಜ ಸೇವಕನಾಗಿದ್ದೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಪುನೀತ್ ರಾಜಕುಮಾರ ಸೇವಾ ಮನೋಭಾವ ಇರೋ ವ್ಯಕ್ತಿ. ಅವರಲ್ಲಿರೋ ವಿಚಾರಗಳು ಯಾರಿಗೂ ಬರೋದಿಲ್ಲ. ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ನಮ್ಮ ಬೆಂಬಲವೂ ಇದೆ ಎಂದರು.