ಹಾವೇರಿ: ಅಪ್ಜಲ್ ಗುರುವಿಗೆ ಗಲ್ಲಾದಾಗ ವಿರೋಧಿಸಿದ್ದ ಕನ್ಹಯ್ಯ ಕುಮಾರ್ ಪರ ಕೆಲ ಸಂಘಟನೆಗಳು ನಿಲ್ಲದೇ ಇದ್ದಿದ್ರೆ ಇಂದು ಈ ರೀತಿಯ ದೇಶವಿರೋಧಿ ಹೇಳಿಕೆಗಳು, ಘೋಷಣೆಗಳು ಕೇಳಿ ಬರುತ್ತಿರಲಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಹಾವೇರಿಯಲ್ಲಿ ಮಾತನಾಡಿದ ಅವರು, ಅಂದು ಈ ಸಂಘಟನೆಗಳು ಕನ್ಹಯ್ಯನ ಪರ ನಿಲ್ಲದಿದ್ದರೆ ಇಂದು ಈ ರೀತಿಯ ದೇಶವಿರೋಧಿ ಹೇಳಿಕೆಗಳು, ಘೋಷಣೆಗಳು ಕೇಳಿ ಬರುತ್ತಿರಲಿಲ್ಲ. ಸಿಎಎ ಜಾರಿಗೆ ತಂದಾಗಿನಿಂದ ಈ ರೀತಿಯ ಬೆಳವಣಿಯಾಗುತ್ತಿದ್ದು, ಈ ರೀತಿಯ ಪ್ರಕರಣಗಳನ್ನು ರಾಜ್ಯದಿಂದ ಬೇರು ಸಮೇತ ಕಿತ್ತೊಗೆಯುವುದಾಗಿ ಹೇಳಿದರು.
ಅಲ್ಲದೇ ದೇಶವಿರೋಧಿ ಹೇಳಿಕೆಗಳ ಕುರಿತಂತೆ ಕಾಲೇಜು ಆಡಳಿತ ಮಂಡಳಿಗಳು ಕ್ರಮ ಕೈಗೊಳ್ಳಬೇಕು. ಕಾರ್ಯಕ್ರಮಗಳನ್ನ ಆಯೋಜಿಸುವ ಸಂಘಟನೆಗಳು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು. ಇದೇ ವೇಳೆ ಅಮೆರಿಕದಲ್ಲಿರುವ ವಾಟ್ಸಪ್, ಫೇಸ್ಬುಕ್ ಕಂಪನಿಗಳು ದೇಶವಿರೋಧಿ ಹೇಳಿಕೆಗಳನ್ನು ಪ್ರಕಟಿಸುವ ಮುನ್ನ ಪರಾಮರ್ಶೆ ಮಾಡಬೇಕು. ಪ್ರಸ್ತುತ ದಿನಗಳಲ್ಲಿ ಅಂತರ್ಜಾಲ ಸಮೂಹ ವೇದಿಕೆಯಾಗುತ್ತಿದ್ದು, ಇದನ್ನ ದೇಶದ್ರೋಹ ಚಟುವಟಿಕೆಗೆ ಬಳಸಿಕೊಳ್ಳುತ್ತಿರುವ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಮಾತನಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಮೂಲ್ಯಗೆ ಪೂರ್ತಿಯಾಗಿ ಮಾತನಾಡಲು ಅವಕಾಶ ನೀಡಬೇಕಿತ್ತು ಎಂಬ ಮಾಜಿ ಸಚಿವ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ದೇಶದ್ರೋಹದ ಘೋಷಣೆ ಕೂಗಿದ ಮೇಲೆ ಇನ್ನು ಏನು ಮಾತನಾಡಲು ಅವಕಾಶ ಕೊಡಬೇಕಾಗಿತ್ತು ಎಂದು ಖಾರವಾಗಿ ಉತ್ತರಿಸಿದರು.