ಹಾವೇರಿ : ಬಿಜೆಪಿ ಸರ್ಕಾರದಲ್ಲಿ ಮುಂಬೈಗೆ ಹೋದ ಹಲವು ಶಾಸಕರಿಗೆ ಅಧಿಕಾರ ಸಿಕ್ಕಿದೆ. ಆದರೆ ನನಗೆ ಮತ್ತು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರಿಗೆ ಮಾತ್ರ ಅಧಿಕಾರ ಸಿಕ್ಕಿಲ್ಲ. ಹೈಕಮಾಂಡ್ ನಮಗೆ ಸೂಕ್ತ ಸ್ಥಾನಮಾನ ನೀಡುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಆರ್.ಶಂಕರ್ ತಿಳಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ನಾನು ಕ್ಷೇತ್ರ ಕಳೆದುಕೊಂಡೆ. ಸಚಿವ ಸ್ಥಾನ ಕಳೆದುಕೊಂಡೆ ಎಂದು ಸಾರ್ವಜನಿಕವಾಗಿ ಹೇಳಿರುವುದು ನನ್ನ ತ್ಯಾಗ ನೆನಪಿಸಲು. ಮಗು ಅತ್ತರೆ ಮಾತ್ರ ತಾಯಿ ಹಾಲುಣಿಸುತ್ತಾಳೆ. ಹೀಗಾಗಿ ನಾನು ಹಿಂದೆ ಈ ರೀತಿ ಮಾಡಿದ್ದೆ ಎಂದು ನೆನಪಿಸಲು ಹೇಳಿಕೆ ನೀಡಿರುವುದಾಗಿ ಆರ್.ಶಂಕರ್ ತಿಳಿಸಿದರು.
ಸರ್ಕಾರ ರಚನೆಗೆ ಹಣ ಪಡೆದಿದ್ದೇನೆ ಎಂದು ಆರೋಪ : ನಾನು ಸರ್ಕಾರ ರಚನೆಗಾಗಿ ಹಣ ಪಡೆದಿದ್ದೇನೆ ಎಂದು ಕೆಲವರು ಆರೋಪಿಸಿದ್ದರು. ಇದಕ್ಕಾಗಿ ಸಿಎಂ ಮುಂದೆ ಬಿಜೆಪಿ ರಾಜ್ಯಾಧ್ಯಕ್ಷರ ಮುಂದೆ ನನ್ನ ಅಳಲು ತೋಡಿಕೊಂಡಿದ್ದೇನೆ. ಕಡಿಮೆ ಅವಧಿಯಲ್ಲಿ ಮೂರು ಬಾರಿ ಸಚಿವನಾದೆ. ಇಲಾಖೆ ಅರ್ಥ ಮಾಡಿಕೊಳ್ಳುವಷ್ಟರಲ್ಲಿಯೇ ನನ್ನ ಖಾತೆ ಬದಲಾವಣೆಯಾಗುತ್ತಿತ್ತು ಎಂದು ಹೇಳಿದರು.
ನನ್ನ ಕಾರ್ಯಕರ್ತರಿಗೆ ಯಾವುದೇ ಸ್ಥಾನ ಸಿಕ್ಕಿಲ್ಲ. ಸತ್ಯಹರಿಶ್ಚಂದ್ರಗಿಂತ ಹೆಚ್ಚು ಕಷ್ಟ ಅನುಭವಿಸಿದ್ದೇನೆ. ಐದಾರು ಖಾತೆಗಳನ್ನು ಖಾಲಿ ಇಟ್ಟುಕೊಳ್ಳುವದಕ್ಕಿಂತ ಅದರಲ್ಲಿ ನನಗೆ ಒಂದು ಸಚಿವ ಸ್ಥಾನ ನೀಡುವಂತೆ ಕೇಳಿದ್ದೇನೆ. ಅದು ನನ್ನ ಹಕ್ಕು. ಚುನಾವಣೆಗೆ ಆರೇಳು ತಿಂಗಳು ಬಾಕಿ ಇದೆ. ಇವುಗಳನ್ನು ಖಾಲಿ ಇಟ್ಟುಕೊಳ್ಳುವುದಕ್ಕಿಂತ ನೀಡುವುದು ಉತ್ತಮ ಅವರು ಹೇಳಿದರು.
ನಾಲ್ಕಾರು ತಿಂಗಳಾದರು ನನಗೆ ಸಚಿವ ಸ್ಥಾನ ನೀಡಿ, ಅವಕಾಶ ಮಾಡಿಕೊಟ್ಟರೆ ಜನರ ಸೇವೆ ಮಾಡುತ್ತೇನೆ. ನಾನು ತ್ಯಾಗ ಮಾಡಿರುವುದಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದೇನೆ ಎಂದರು.
ಸಾರ್ವಜನಿಕ ಸೇವೆಯಲ್ಲಿ ಇರಲು ಬಯಸುತ್ತೇನೆ : ನೀವು ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿನಾ ಪ್ರಶ್ನೆಗೆ ಉತ್ತರಿಸಿದ ಅವರು, ಆ ವಿಷಯ ಬಂದಾಗ ಮಾತನಾಡುತ್ತೇನೆ. ಇಲ್ಲದಿದ್ದರೆ ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೊಲಿಸಿದಂತಾಗುತ್ತದೆ. ನಾಲ್ಕಾರು ಖಾತೆಗಳನ್ನು ಖಾಲಿ ಇಟ್ಟು ಕಾಲಹರಣ ಮಾಡದೆ ನನ್ನಂತ ಅಕಾಂಕ್ಷಿಗಳಿಗೆ ಹಂಚಿಕೆ ಮಾಡಬೇಕು. ನಾನು ಸಾರ್ವಜನಿಕ ಸೇವೆಯಲ್ಲಿ ಇರಲು ಬಯಸುತ್ತೇನೆ ಎಂದು ತಿಳಿಸಿದರು.
2018 ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿದ ಏಕೈಕ ಅಭ್ಯರ್ಥಿ ನಾನು. ನಾಗೇಶ್ವರ ಗೆದ್ದಿದ್ದರೂ ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದರು. ಬೆಂಗಳೂರು ಮಾದರಿಯಲ್ಲಿ ರಾಣೆಬೆನ್ನೂರು ಕ್ಷೇತ್ರವನ್ನು ಮಾದರಿಯನ್ನಾಗಿ ಅಭಿವೃದ್ಧಿ ಮಾಡಬೇಕು ಎನ್ನುವುದು ನನ್ನ ಗುರಿಯಾಗಿತ್ತು ಎಂದರು.
ಸಮ್ಮಿಶ್ರ ಸರ್ಕಾರದ ಸಚಿವನಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ : ಸಮ್ಮಿಶ್ರ ಸರ್ಕಾರದಲ್ಲಿ ಸಚಿವನಾಗಿ ಕ್ಷೇತ್ರದಲ್ಲಿ ಒಳ್ಳೆಯ ರಸ್ತೆಗಳನ್ನು ಮಾಡಿಸಿದ್ದೇನೆ. ಹೊನ್ನಾಳಿಯಿಂದ ಗದಗವರೆಗೆ ರಸ್ತೆಯಾಗುತ್ತಿರುವುದು ನನ್ನ ಅವಧಿಯಲ್ಲಿಯೇ. 165 ಕೋಟಿ ವೆಚ್ಚದಲ್ಲಿ ಎಪಿಎಂಸಿ ಅಭಿವೃದ್ಧಿ, ಕೆರೆ ಅಭಿವೃದ್ಧಿ ಎಲ್ಲವನ್ನು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಾಡಿದ್ದೇನೆ.
17 ಜನ ಸಮ್ಮಿಶ್ರ ಸರ್ಕಾರ ತೊರೆದು ಬಿಜೆಪಿ ಸರ್ಕಾರ ತಂದೆವು : 17 ಜನ ಸಮ್ಮಿಶ್ರ ಸರ್ಕಾರ ತೊರೆದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ತಂದೆವು. ಇದರಲ್ಲಿ ನಾನು ಸಚಿವನಾದರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಬಹುದು ಎನ್ನುವ ಕಾರಣಕ್ಕೆ ಬಿಜೆಪಿಗೆ ಸೇರಿದೆ. ಸಮ್ಮಿಶ್ರ ಸರ್ಕಾರದಲ್ಲಿ ನಮಗೇನು ತೊಂದರೆ ಇರಲಿಲ್ಲ. ಹಾವೇರಿ ಜಿಲ್ಲೆ ಉಸ್ತುವಾರಿ ಮಾಡಿ ಎಂದು ಕೇಳಿದ್ದೆ. ನನ್ನ ಮತದಾರರಿಗೆ ಕ್ವಾಟರ್ಸ್ ಕೇಳಿದ್ದೆ. ಅವುಗಳನ್ನು ನೀಡದಿರುವುದಕ್ಕೆ ಸರ್ಕಾರ ಕೆಡವಿದ್ದಾಗಿ ಹೇಳಿದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಬಂದರೆ ನಮ್ಮ ಕ್ಷೇತ್ರಕ್ಕೆ ಹೆಚ್ಚು ಅಭಿವೃದ್ಧಿ ಯೋಜನೆ ತರಬಹುದು ಎನ್ನುವುದಕ್ಕೆ ಸಮ್ಮಿಶ್ರ ಸರ್ಕಾರ ಕೆಡವಿದ್ದೆವು ಎಂದು ಮಾಜಿ ಸಚಿವ ಆರ್ ಶಂಕರ್ ತಿಳಿಸಿದ್ದಾರೆ.
ಇದನ್ನೂ ಓದಿ :ವಿಶ್ವ ಬಂಟರ ಮಹಾ ಅಧಿವೇಶನ: ಮುಂಬೈಗೆ ತೆರಳಿದ ಸಿಎಂ ಬೊಮ್ಮಾಯಿ