ಹಾವೇರಿ: ಜಿಲ್ಲೆಯ ಜನ ಮತ್ತೆ ಆತಂಕಕ್ಕೀಡಾಗಿದ್ದಾರೆ. ಕೇವಲ 15 ದಿನ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಧಾರಾಕಾರವಾಗಿ ಸುರಿಯುತ್ತಿದೆ. ನೆರೆಯಿಂದ ಇಷ್ಟೆಲ್ಲಾ ಅನಾಹುತಗಳಾದರೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ ಎಂದು ನೆರೆ ಸಂತ್ರಸ್ತರು ಆರೋಪಿಸಿದ್ದಾರೆ.
ಕಳೆದ ಏಳು ದಶಕಗಳಲ್ಲಿ ಕಾಣದ ನೆರೆ ಹಾವಳಿಯನ್ನು ಹಾವೇರಿ ಜಿಲ್ಲೆ ಈ ವರ್ಷ ಅನುಭವಿಸಿದೆ. ಜಿಲ್ಲೆಯ ಕುಮದ್ವತಿ, ವರದಾ, ಧರ್ಮಾ ಮತ್ತು ತುಂಗಭದ್ರಾ ನದಿಗಳ ಪ್ರವಾಹಕ್ಕೆ 50 ಕ್ಕೂ ಹೆಚ್ಚು ಗ್ರಾಮಗಳು ನಲುಗಿವೆ. ಸುಮಾರು 15,387 ಮನೆಗಳು ಭಾಗಶಃ ಹಾನಿಗೀಡಾಗಿದ್ದು 68 ಮನೆಗಳು ಧರೆಗುರುಳಿವೆ.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಿ.ಎಂ. ಯಡಿಯೂರಪ್ಪ ಈ ಕುರಿತಂತೆ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಆದರೆ, ಅದು ಕೇವಲ ಕಾಟಾಚಾರದ ಭೇಟಿಯಾಗಿದೆಯೇ ಹೊರತು ಅದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪಗಳು ಸಹ ಕೇಳಿಬಂದಿವೆ.
ಮುಖ್ಯಮಂತ್ರಿಗಳು ಬಂದು ಹೋದ ಮೇಲೆ ಜಿಲ್ಲೆಯ ಚಿತ್ರಣ ಬದಲಾಗುತ್ತೆ ಅಂದುಕೊಂಡಿದ್ದೆವು. ಆದರೆ ನೆರೆ ಸಂತ್ರಸ್ತರಿಗೆ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ನೆರೆ ಸಂತ್ರಸ್ತರ ನೆರವಿಗೆ ಬಂದಿಲ್ಲವೆಂದು ರಾಜಕೀಯ ಮುಖಂಡರು ಆರೋಪಿಸಿದ್ದಾರೆ.