ರಾಣೆಬೆನ್ನೂರು: ನಗರ ಸೇರಿದಂತೆ ತಾಲೂಕಿನಲ್ಲಿ ಕಳೆದೆರೆಡು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಬೆಳೆಗಳು ನಾಶವಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಸುಮಾರು ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಮನೆಗಳು ಬಿದ್ದಿವೆ ಹಾಗೂ ಕೆರೆಗಳು ಭರ್ತಿಯಾಗಿ ನಗರದಲ್ಲಿ ಹರಿಯಲಾರಂಭಿಸಿವೆ. ತಾಲೂಕಿನ ಕೆಲ ಗ್ರಾಮಗಳಲ್ಲಿ ಕೆರೆ ಒಡೆದು ಜಮೀನುಗಳಲ್ಲಿ ನೀರು ನುಗ್ಗಿ ಬೆಳೆ ನಾಶವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಹಾರ ಕಾರ್ಯಕ್ಕಾಗಿ ತಾಲೂಕಿನ ಅಧಿಕಾರಿಗಳು ಜಲಾವೃತಗೊಂಡ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ನಗರದ ದೊಡ್ಡ ಕೆರೆ ಸಂಪೂರ್ಣವಾಗಿ ಭರ್ತಿಯಾಗಿದ್ದು, ಕೆರೆಯ ನೀರು ನಗರದ ತಗ್ಗು ಪ್ರದೇಶಗಳಲ್ಲಿ ತುಂಬಿ ಹರಿಯುತ್ತಿದೆ. ನಗರಸಭೆ ಅಧಿಕಾರಿಗಳು ಮುಂಜಾಗೃತ ಕ್ರಮವಾಗಿ ಜಲಾವೃತ ಪ್ರದೇಶಗಳಲ್ಲಿನ ಜನರನ್ನು ತಾತ್ಕಾಲಿಕವಾಗಿ ಆಸರೆ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ. ರೈತರು ಬೆಳೆಗಳು ಇನ್ನೇನು ಕೈಗೆ ಬರುತ್ತಿವೆ ಎನ್ನುವಷ್ಟರಲ್ಲಿ ಮಳೆ ಅವಾಂತರಕ್ಕೆ ಸಿಲುಕಿ ಹಾಳಾಗಿವೆ.
ತಾಲೂಕಿನಲ್ಲಿ ಒಟ್ಟು 6200 ಹೆಕ್ಟೇರ್ ಪ್ರದೇಶ ಬೆಳೆ ನೀರಿನಲ್ಲಿ ಜಲಾವೃತವಾಗಿದೆ. ಅವುಗಳಲ್ಲಿ ಮೆಕ್ಕೆಜೋಳ, ಭತ್ತ, ಕಬ್ಬು, ಈರುಳ್ಳಿ, ಎಲೆಬಳ್ಳಿ, ಹತ್ತಿ, ಬೆಳೆಗಳು ನಾಶವಾಗಿವೆ. ಮೇಡ್ಲೇರಿ ಕೆರೆಯಲ್ಲೂ ನೀರು ಭರ್ತಿಯಾದ ಹಿನ್ನೆಲೆಯಲ್ಲಿ ಭತ್ತದ ಗದ್ದೆಗಳು ಬಹುತೇಕ ಮುಳುಗಿವೆ.
ಇನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ತಹಶಿಲ್ದಾರ್ ಸ್ಥಳಕ್ಕೆ ಭೇಟಿ ನೀಡಿ, ಬೆಳೆ ಹಾನಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.