ಹಾವೇರಿ: ರಾಣೆಬೆನ್ನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯನ ಧನದಾಹಿ ಮನಸ್ಥಿತಿಯಿಂದ ಗರ್ಭಕೋಶ ಕಳೆದುಕೊಂಡ ಮಹಿಳೆಯರು ಇದೀಗ ಮತ್ತೆ ಶಿಗ್ಗಾಂವಿಯಲ್ಲಿ ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಈ ಸಂತ್ರಸ್ತ ಮಹಿಳೆಯರು ಈ ಹಿಂದೆ ಎಪ್ರಿಲ್ 25 ರಂದು ರಾಣೆಬೆನ್ನೂರಿಂದ ಶಿಗ್ಗಾಂವಿಯ ಸಿಎಂ ಮನೆಯವರೆಗೆ ಪಾದಯಾತ್ರೆ ಹೊರಟಿದ್ದರು. ಈ ಸಂದರ್ಭದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಜಿಲ್ಲಾಡಳಿತ ಪ್ರತಿಭಟನಾಕಾರರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ, ಸಿಎಂ ಜೊತೆ ಚರ್ಚಿಸಿ ತಮಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿತ್ತು. ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದ್ದಾರೆ ಎಂದು ಮಹಿಳೆಯರಿಗೆ ತಿಳಿಸಲಾಗಿತ್ತು. ಆದರೆ, ಸಿಎಂ ಮತ್ತು ಜಿಲ್ಲಾಡಳಿತ ನೀಡಿದ ಭರವಸೆ ಭರವಸೆಯಾಗಿಯೇ ಉಳಿದಿದೆ. ಪರಿಣಾಮ ಸಂತ್ರಸ್ತರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.
ಪ್ರತಿಭಟನೆ ನಡೆದು ನೂರು ದಿನಗಳ ಮೇಲಾದರೂ ಹಾವೇರಿ ಜಿಲ್ಲಾಡಳಿತ ಇವರ ಕಡೆ ಗಮನ ಹರಿಸಿಲ್ಲ. ಇದರಿಂದ ನೊಂದ ಮಹಿಳೆಯರು ಇದೀಗ ಅಗಸ್ಟ್ 13 ರಿಂದ ಮತ್ತೆ ಸಿಎಂ ಮನೆಯವರಿಗೆ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ. ಏಪ್ರಿಲ್‌ನಲ್ಲಿ ಜಿಲ್ಲಾಡಳಿತ ತಡೆದ ಪ್ರತಿಭಟನಾ ಸ್ಥಳ ನೆಲೋಗಲ್ಲ ಗ್ರಾಮದಿಂದ ಸಿಎಂ ಶಿಗ್ಗಾಂವಿ ನಿವಾಸದವರೆಗೆ ಪಾದಯಾತ್ರೆ ನಡೆಸುವುದಾಗಿ ಮಹಿಳೆಯರು ಎಚ್ಚರಿಕೆ ರವಾನಿಸಿದ್ದಾರೆ.
ಇದೇ 13 ರಿಂದ ಪಾದಯಾತ್ರೆ ಕೈಗೊಂಡು 15 ತಾರೀಖಿಗೆ ಸಿಎಂ ನಿವಾಸದ ಮುಂದೆ ಧ್ವಜಹಾರಿಸುವ ಮೂಲಕ ಸ್ವಾತಂತ್ರೋತ್ಸವ ಆಚರಿಸುವುದಾಗಿ ಪ್ರತಿಭಟನೆಯ ನೇತೃತ್ವ ವಹಿಸಿರುವ ಮುಖಂಡರು ತಿಳಿಸಿದ್ದಾರೆ. ನಮಗೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಈ ಬಡ ಮಹಿಳೆಯರಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ಇನ್ಮುಂದೆಯಾದರು ಇವರಿಗೆ ವಿಶೇಷ ಪ್ಯಾಕೇಜ್ ಮೂಲಕ ಸ್ವಾತಂತ್ರ್ಯ ಲಭಿಸಲಿ ಎಂದು ಈ ರೀತಿ ಹೋರಾಟ ಮಾಡುತ್ತಿರುವುದಾಗಿ ಪ್ರತಿಭಟನೆಯ ಮುಂದಾಳುಗಳು ಆಗ್ರಹಿಸಿದ್ದಾರೆ.
ಘಟನೆ ಏನು?: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಆರೋಗ್ಯ ಕೇಂದ್ರದಲ್ಲಿ ಈ ಹಿಂದೆ ಡಾ. ಪಿ ಶಾಂತ ಎಂಬು ವೈದ್ಯ ಕಾರ್ಯನಿರ್ವಹಿಸುತ್ತಿದ್ದರು. ಇವರು ಆಸ್ಪತ್ರೆಗೆ ಬರುವ ಬಡ ಮಹಿಳೆಯರಿಗೆ ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅವರು ಯಾವುದೇ ರೋಗ ಅಂತ ಬಂದರೂ ಸಹ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು. ಹಣದ ದುರಾಸೆಯಿಂದ ಡಾ. ಶಾಂತ ರಾಣೆಬೆನ್ನೂರು ತಾಲೂಕಿನ ವಿವಿಧ ಗ್ರಾಮಗಳ 1,522 ಮಹಿಳೆಯರ ಗರ್ಭಕೋಶ ಕಿತ್ತು ಹಾಕಿದ್ದೆರು. ವಿಚಿತ್ರ ಅಂದರೆ ಮದುವೆಯಾಗದ ಯುವತಿಯರ ಗರ್ಭಕೋಶವನ್ನೂ ಸಹ ಸಹ ಡಾ. ಶಾಂತ ಶಸ್ತ್ರಚಿಕಿತ್ಸೆಯಿಂದ ತಗೆದುಹಾಕಿದ್ದರು.
ಅಂದಿನಿಂದ ಈ ಮಹಿಳೆಯರು ಹೋರಾಟ ಮಾಡುತ್ತಿದ್ದರೂ ಇದುವರೆಗೂ ಇವರಿಗೆ ನ್ಯಾಯಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆಯರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಗರ್ಭಕೋಶಕ್ಕೆ ಕತ್ತರಿ ಕೇಸ್: ಕಾನೂನಿನಡಿ ಮಹಿಳೆಯರಿಗೆ ಪರಿಹಾರ- ಸಿಎಂ