ಹಾವೇರಿ: ಬಿ.ಎಸ್.ಯಡಿಯೂರಪ್ಪ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ, ಇಂದು ಮುಖ್ಯಮಂತ್ರಿಯಾಗುವವರೆಗೂ ಹೋರಾಟದ ಬದುಕನ್ನ ನಡೆಸಿಕೊಂಡು ಬಂದಿದ್ದಾರೆ. ದೂರದೃಷ್ಟಿಯುಳ್ಳ ಬಿಎಸ್ವೈಗೆ ರಾಜ್ಯದಲ್ಲಿ ಪೂರ್ಣ ಅವಧಿವರೆಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಎಲ್ಲರೂ ಸಹಕರಿಸಬೇಕೆಂದು ರಂಭಾಪುರಿ ಶ್ರೀಗಳು ತಿಳಿಸಿದರು.
ಹಾವೇರಿಯಲ್ಲಿ ಮಾತನಾಡಿದ ಶ್ರೀಗಳು, ಯಡಿಯೂರಪ್ಪ ಎಲ್ಲ ವರ್ಗದ ಜನರ ಹಿತಕಾಯುವ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಅವರ ಬೆಳವಣಿಗೆಯನ್ನ ಅವರ ಪಕ್ಷದ ಮತ್ತು ಬೇರೆ ಪಕ್ಷದ ರಾಜಕಾರಣಿಗಳಿಗೆ ಸಹಿಸಲು ಆಗುತ್ತಿಲ್ಲ. ಅವರ ಬಗ್ಗೆ ಹಲವು ಗೊಂದಲ ಸೃಷ್ಟಿಸುವ ಬದಲು ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಬಿಡಬೇಕು ಎಂದು ಶ್ರೀಗಳು ತಿಳಿಸಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ನೋವುಂಡಿದ್ದಾರೆ. ಅವರು ಸರ್ಕಾರದ ಹೊರಗೆ ಇದ್ದು ಬಿಜೆಪಿಗೆ ಬೆಂಬಲ ನೀಡುವ ಧೋರಣೆ ಹೊಂದಿದ್ದಾರೆ. ಹೆಚ್ಡಿಕೆ ಅನುಭವದಿಂದ ಚುನಾವಣೆಗೆ ತೊಂದರೆಯಾಗಬಹುದು. ಅವರು ಬಿಜೆಪಿ ಸರ್ಕಾರಕ್ಕೆ ಸಹಕಾರ ನೀಡಿದರೆ ಒಳ್ಳೆಯದು. ಈಗ ನಡೆಯುವ ಉಪಚುನಾವಣೆಯ ಫಲಿತಾಂಶ ಮುಂದಿನ ಭವಿಷ್ಯ ನಿರ್ಧರಿಸಲಿದೆ ಎಂದು ರಂಭಾಪುರಿ ಶ್ರೀಗಳು ಹೇಳಿದರು.