ಹಾವೇರಿ: ವೃತ್ತಿಯಲ್ಲಿ ಆಕ್ಷಕನಾಗಿ ಕೆಲಸ ಮಾಡುತ್ತಿರುವ ಈ ವ್ಯಕ್ತಿ ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಸಮಾಜದ ಸ್ವಾಸ್ಥ್ಯ ಕಾಪಾಡುವ ಜೊತೆ ಜೊತೆಗೆ ಉರಗಗಳ ರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ರಮೇಶ್ ಎಂಬ ವ್ಯಕ್ತಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಆರಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಉರಗ ಪ್ರೇಮಿಯಾಗಿದ್ದಾರೆ. ಪ್ರಕೃತಿಯಲ್ಲಿರುವ ಹಾವುಗಳ ಮಹತ್ವ ತಿಳಿದಿರುವ ಇವರು, ತಮ್ಮ ಕೆಲಸದ ಜೊತೆಗೆ ಅವುಗಳ ರಕ್ಷಣೆ ಮಾಡುತ್ತಿದ್ದಾರೆ. ಕಳೆದ 21 ವರ್ಷಗಳಿಂದ ಹಾವುಗಳನ್ನು ಹಿಡಿಯುತ್ತಿದ್ದು, ಇಲ್ಲಿಯವರೆಗೆ ಸುಮಾರು 10 ಸಾವಿರಕ್ಕೂ ಅಧಿಕ ಉರಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಬಿಟ್ಟು ಬಂದಿದ್ದಾರೆ.
ಮಂಡಲದ ಹಾವು, ಕೆರೆಗೊಡ್ಡ, ನೀರಾವು ಸೇರಿದಂತೆ ಜಿಲ್ಲೆಯಲ್ಲಿ ಕಾಣುವ ಎಲ್ಲಾ ಜಾತಿಯ ಹಾವುಗಳನ್ನು ಹಿಡಿದಿದ್ದಾರೆ. ಹಾವುಗಳನ್ನು ಹಿಡಿಯುವದಲ್ಲದೆ ಜನರಲ್ಲಿ ಹಾವುಗಳ ಮಹತ್ವ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಲ್ಲೇ ಹಾವುಗಳು ಕಂಡರೂ ಜನರು ಮೊದಲು ಇವರಿಗೆ ಕರೆ ಮಾಡುತ್ತಾರೆಂತೆ. ಈ ಮೂಲಕ ಇವರು ಸ್ನೇಕ್ ರಮೇಶ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.
ಕರ್ತವ್ಯದ ಮಧ್ಯೆ ಬರುವ ಕರೆಗಳಿಗೆ ಓಗೊಟ್ಟು ಜನರ ಸಮಸ್ಯೆ ಸ್ಪಂದಿಸುವ ರಮೇಶ್ರವರ ಈ ಕಾರ್ಯಕ್ಕೆ ಪೊಲೀಸ್ ಇಲಾಖೆಯಿಂದ ಹಿಡಿದು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.