ಹಾವೇರಿ: ಕೃಷಿಗೆ ಬಳಸುವ ಯುರಿಯಾ ಗೊಬ್ಬರವನ್ನು ಮಾರ್ಪಡಿಸಿ ಕೈಗಾರಿಕೆಗಳಿಗೆ ಮಾರಾಟ ಮಾಡುವ ಜಾಲವನ್ನು ಹಾವೇರಿ ಜಿಲ್ಲಾ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಶಬರಿ ಮತ್ತು ಮಹೇಶ ಬಂಧಿತರು. ಹಾವೇರಿಯ ಹಳೆಯ ಪಿಬಿ ರಸ್ತೆಯಲ್ಲಿ ದಾಖಲಾತಿಗಳ ಪರಿಶೀಲನೆ ನಡೆಸುವ ವೇಳೆ ತಮಿಳುನಾಡು ಮೂಲದ ಲಾರಿಯೊಂದರ ದಾಖಲಾತಿಗಳು ಸಮರ್ಪಕವಾಗಿರಲಿಲ್ಲ. ಇದರಲ್ಲಿ ಯುರಿಯಾ ಗೊಬ್ಬರ ಇರುವುದನ್ನ ಪತ್ತೆ ಹಚ್ಚಿದ ಪೊಲೀಸರು ಕೃಷಿ ಅಧಿಕಾರಿಗಳನ್ನ ಕರೆದು ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಈ ಅಕ್ರಮ ಬೆಳಕಿಗೆ ಬಂದಿದೆ.
ಜಿಲ್ಲೆಯಲ್ಲಿ ವಿವಿಧ ಡೀಲರ್ಗಳಿಂದ ಸರ್ಕಾರದಿಂದ ಸಬ್ಸಿಡಿ ದರದಲ್ಲಿ 45 ಕೆಜಿ ತೂಕದ ಚೀಲಗಳನ್ನು 300 ರೂ.ನಂತೆ ಖರೀದಿಸಿ, ನಂತರ ಅದನ್ನ ಕೈಗಾರಿಕೆಗಳಿಗೆ ಬಳಸುವ ಯುರಿಯಾ ಚೀಲದಲ್ಲಿ ತುಂಬಿ ಚೀಲಕ್ಕೆ 1,500 ರೂ.ನಂತೆ ಮಾರಾಟ ಮಾಡುತ್ತಿದ್ದರು ಎನ್ನುವ ಅಂಶ ಬೆಳಕಿಗೆ ಬಂದಿದೆ. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಹಾವೇರಿ ಜಿಲ್ಲೆಯಿಂದ ಖರೀದಿಸಿ ಹೊರ ರಾಜ್ಯಗಳಾದ ತಮಿಳುನಾಡು ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಕೈಗಾರಿಕೆಗಳಿಗೆ ಈ ರೀತಿಯ ಮಾರ್ಪಡಾದ ಯುರಿಯಾವನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ಹಾವೇರಿ ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನ ಬಂಧಿಸಿದ್ದು, 7 ಲಕ್ಷದ 20 ಸಾವಿರ ರೂ. ಮೌಲ್ಯದ 700 ಚೀಲಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಗೊಬ್ಬರ ಅಂಗಡಿ ಸೇರಿದಂತೆ ಡೀಲರ್‌ಗಳು ಸೇರಿರಬಹುದು ಎಂದು ಎಸ್ಪಿ ಹನುಮಂತರಾಯ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ತನಿಖಾ ತಂಡ ರಚಿಸಲಾಗಿದ್ದು, ತನಿಖೆ ವೇಳೆ ಯುರಿಯಾ ಗೊಬ್ಬರ ಎಲ್ಲಿಂದ ತರಲಾಗುತ್ತಿತ್ತು?. ಎಲ್ಲಿಗೆ ಮಾರಾಟ ಮಾಡಲಾಗುತ್ತಿತ್ತು? ಎನ್ನುವ ಕುರಿತು ಮಾಹಿತಿ ತಿಳಿಯಲಿದೆ ಎಂದು ಎಸ್ಪಿ ಹೇಳಿದರು.