ಹಾವೇರಿ: ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಜಿಲ್ಲೆಯ ಮೂವರು ಪ್ರಭಾವಿ ನಾಯಕರು ಸಚಿವರಾಗಿದ್ದಾರೆ. ಆದರೆ, ಈ ಮೂವರು ಸಚಿವರು ತಮ್ಮ-ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಶಿಗ್ಗಾವಿ-ಸವಣೂರು ಕ್ಷೇತ್ರದಿಂದ ಗೃಹಸಚಿವ ಬಸವರಾಜ್ ಬೊಮ್ಮಾಯಿ, ಹಿರೇಕೆರೂರು-ರಟ್ಟಿಹಳ್ಳಿ ಕ್ಷೇತ್ರದ ಕೃಷಿ ಸಚಿವ ಬಿ.ಸಿ. ಪಾಟೀಲ್ ಹಾಗೂ ರಾಣೆಬೆನ್ನೂರಲ್ಲಿ ಕಳೆದ ಬಾರಿ ಶಾಸಕರಾಗಿದ್ದ ಆರ್.ಶಂಕರ್ ಈ ಬಾರಿ ರೇಷ್ಮೆ ಮತ್ತು ತೋಟಗಾರಿಕೆ ಸಚಿವರಾಗಿದ್ದಾರೆ. ಆದರೆ, ಈ ಮೂವರು ಶಾಸಕರು ಕೇವಲ ತಮ್ಮ ಕ್ಷೇತ್ರಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಹೆಸರಿಗೆ ಮಾತ್ರ ಹಾವೇರಿ ಜಿಲ್ಲೆಗೆ ಮೂವರಿಗೆ ಸಚಿವರ ಪಟ್ಟ. ಈ ಸಚಿವರು ಮಾತ್ರ ತಮ್ಮ ಕ್ಷೇತ್ರ ಬಿಟ್ಟು ಜಿಲ್ಲೆಯ ಉಳಿದ ಕ್ಷೇತ್ರಗಳನ್ನ ಕಡೆಗಣಿಸಿದ್ದಾರೆ ಎಂಬುದು ಈ ಭಾಗದ ಜನರ ದೂರು.
ಕೃಷಿ ಸಚಿವ ಬಿ.ಸಿ. ಪಾಟೀಲ್ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರಾಜ್ಯದಲ್ಲಿ ಅತಿಹೆಚ್ಚು ಮೆಕ್ಕೆಜೋಳ ಬೆಳೆಯುವ ಜಿಲ್ಲೆ ಹಾವೇರಿ. ಆದರೆ, ಕೃಷಿ ಸಚಿವರು ಮೆಕ್ಕೆಜೋಳ ಖರೀದಿ ಕೇಂದ್ರ ಮತ್ತು ಬೆಂಬಲ ಬೆಲೆ ನೀಡುವಲ್ಲಿ ವಿಫಲರಾಗಿದ್ದಾರೆ. ಮೂವರು ಸಚಿವರನ್ನ ಹೊಂದಿರುವ ಹಾವೇರಿ ಜಿಲ್ಲೆ ಸಾಕಷ್ಟು ಅಭಿವೃದ್ಧಿ ಕಾಣಬೇಕಿತ್ತು. ಆದರೆ, ಪ್ರಸ್ತುತ ಈ ಸಚಿವರ ಕಾರ್ಯಕ್ರಮಗಳನ್ನು ನೋಡಿದರೆ, ಜಿಲ್ಲೆಯನ್ನ ಮರೆತು ತಮ್ಮ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಎಂಬುದು ತಿಳಿಯುತ್ತದೆ ಎಂದು ರೈತ ಮುಖಂಡರು ಕಿಡಿಕಾರಿದ್ದಾರೆ.
ಓದಿ: ಪಕ್ಷ ಬಯಸಿದ್ರೆ ಗೋಕಾಕ್ನಿಂದಲೇ ಸ್ಪರ್ಧೆ ಖಚಿತ: ಸಚಿವ ಜಾರಕಿಹೊಳಿಗೆ ಲಕ್ಷ್ಮಿ ಸವಾಲು
ಜಿಲ್ಲೆಯ ಹಾವೇರಿ, ಹಾನಗಲ್ ಮತ್ತು ಬ್ಯಾಡಗಿ ಕ್ಷೇತ್ರಗಳಿಗೆ ಯಾವ ಸಚಿವರು ಬರುತ್ತಿಲ್ಲ. ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಸಚಿವರು ಸಭೆ ನಡೆಸದೇ ಎಷ್ಟೂ ದಿನಗಳೇ ಗತಿಸಿವೆ. ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನ ಆತಿಥ್ಯ ಸೇರಿದಂತೆ ವಿವಿಧ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಗಳ ಕುರಿತಂತೆ ಸಚಿವರು ಸಭೆ ನಡೆಸಬೇಕಿದೆ. ಕೇವಲ ತಮ್ಮ-ತಮ್ಮ ಕ್ಷೇತ್ರಗಳಿಗೆ ಸೀಮಿತವಾಗಿರದೆ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.