ಹಾವೇರಿ : ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದ ವೃದ್ಧೆಯ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. 98 ವರ್ಷದ ಸಾವಕ್ಕ ಕಳೆದ ರಾತ್ರಿ ಪತ್ತೆಯಾಗಿದ್ದಾಳೆ.
ಸಾವಕ್ಕನನ್ನು ಅಪಹರಣ ಮಾಡಿದ್ದ ಆರೋಪಿಗಳು ಕಳೆದ ರಾತ್ರಿ ಆಡೂರು ಪೊಲೀಸ್ ಠಾಣೆಗೆ ತಂದು ಬಿಟ್ಟಿದ್ದಾರೆ. ಬಳಿಕ ಆಡೂರು ಪೊಲೀಸರು ಸಾವಕ್ಕನ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ.
ಮುಂಜಾನೆ ಆಡೂರು ಪೊಲೀಸ್ ಠಾಣೆಗೆ ಆಗಮಿಸಿದ ಸಾವಕ್ಕನ ಸಂಬಂಧಿಕರು ವೃದ್ಧೆಯನ್ನು ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿ ಸಾವಕ್ಕನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ವೃದ್ಧೆ ಸಾವಕ್ಕನನ್ನು ಡಿಸೆಂಬರ್ 14ರಂದು ಬಾಳಂಬೀಡದ ಮನೆಯಿಂದ ಅಪಹರಣ ಮಾಡಲಾಗಿತ್ತು.
ವೃದ್ಧೆಯ ಏಳು ಎಕರೆ ಜಮೀನು ಪಡೆಯಲು ಆಕೆಯ ಮೈದುನನ ಮಕ್ಕಳೇ ಅಪಹರಿಸಿದ್ದಾರೆ ಎಂದು ಆಡೂರು ಪೊಲೀಸ್ ಠಾಣೆಯಲ್ಲಿ ಏಳು ಮಂದಿ ಮೇಲೆ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದರು.
ಈ ಹಿಂದೆ ಸಾವಕ್ಕ ತನ್ನ ಪತಿ ನಿಧನವಾಗುತ್ತದ್ದಂತೆ ತನ್ನ ಸಂಬಂಧಿ ಮಾಣಿಕ್ಯಪ್ಪನಿಗೆ ಏಳು ಎಕರೆ ಜಮೀನು ಬರೆದುಕೊಟ್ಟಿದ್ದಳು. ಅದೇ ರೀತಿ ಮಾಣಿಕ್ಯಪ್ಪ ವೃದ್ಧೆಯನ್ನು ಜೋಪಾನ ಮಾಡಿಕೊಂಡು ಬಂದಿದ್ದರು.
ಆದರೆ, ಸಾವಕ್ಕನನ್ನು ನೋಡಿಕೊಳ್ಳುತ್ತಿದ್ದ ಮಾಣಿಕಪ್ಪ ಕಳೆದ ಕೆಲ ತಿಂಗಳ ಹಿಂದೆ ನಿಧನರಾಗಿದ್ದರಿಂದ ಆರೋಪಿಗಳು ಮತ್ತೆ ವೃದ್ಧೆಯಿಂದ ಜಮೀನು ಪಡೆಯುವ ಸಲುವಾಗಿ ಅಪಹರಣ ಮಾಡಿದ್ದರು ಎನ್ನಲಾಗಿದೆ.
ಪ್ರಕರಣ ತೀವ್ರತೆ ಪಡೆಯುತ್ತಿದ್ದಂತೆ ಆರೋಪಿಗಳು ವೃದ್ಧೆಯನ್ನು ಪೊಲೀಸ್ ಠಾಣೆಗೆ ತಂದು ಬಿಟ್ಟು ಹೋಗಿದ್ದು, ಅಪಹರಣ ಪ್ರಕರಣ ಸುಖಾಂತ್ಯವಾದಂತಾಗಿದೆ.
ಇದನ್ನೂ ಓದಿ : ಹಾನಗಲ್ನಲ್ಲಿ ಆಸ್ತಿಗಾಗಿ 98 ವರ್ಷದ ವೃದ್ಧೆಯ ಕಿಡ್ನಾಪ್: CCTV ವಿಡಿಯೋ