ಹಾವೇರಿ: ಹಾವೇರಿ ಜಿಲ್ಲಾಡಳಿತ ಮತ್ತು ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ ಜಾನಪದ ಜಾತ್ರೆ ಮನಮೋಹಕವಾಗಿತ್ತು. ಸುಮಾರು ಒಂದು ಕಿ.ಮೀ ದೂರದವರೆಗೆ ವಿವಿಧ ಜಾನಪದ ಕಲಾತಂಡಗಳ ಕಲಾಪ್ರದರ್ಶನ ಜಾನಪದ ಕಲೆ ಸೊಗಡನ್ನ ಬಿಚ್ಚಿಟ್ಟಿತ್ತು.
ಜಾನಪದ ಜಾತ್ರೆಯ ಕೊನೆಯ ದಿನವಾದ ಗುರುವಾರ ಮುರುಘರಾಜೇಂದ್ರ ಮಠದಿಂದ ಆರಂಭವಾದ ಜಾನಪದ ವಾಹಿನಿ ಮೆರವಣಿಗೆಗೆ ಶಾಸಕ ನೆಹರು ಓಲೇಕಾರ್ ಚಾಲನೆ ನೀಡಿದರು. ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಹಾವೇರಿ ಹೊಸಮಠದ ಬಸವ ಶಾಂತಲಿಂಗಶ್ರೀಗಳು ಇಂತಹ ಜಾತ್ರೆಗಳು ಗ್ರಾಮೀಣ ಬದುಕಿನ ಜಾನಪದ ಸೊಗಡಿನ ಕಲೆಯನ್ನ ಅನಾವರಣಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಜಾನಪದ ವಾಹಿನಿ ಮೆರವಣಿಗೆಯಲ್ಲಿ ಜಗ್ಗಲಿಗೆ ಮೇಳ, ಗೊಂಬೆ ಕುಣಿತ, ಡೊಳ್ಳು ಕುಣಿತ, ಪುರವಂತಿಕೆ, ಜಾಂಜ್ ಮೇಳ, ನಂದಿಕೋಲು ಕುಣಿತ, ವೀರಗಾಸೆ, ಬೇಡರ ಕುಣಿತ, ಹಗಲು ವೇಷ, ಕುದುರೆ ಕುಣಿತಗಳು ಆಕರ್ಷಕವಾಗಿದ್ದವು.