ಹಾವೇರಿ: ಕಳೆದ ಕೆಲ ತಿಂಗಳಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 53 ಪ್ರಮುಖ ಪ್ರಕರಣಗಳನ್ನು ಭೇದಿಸಿದ್ದು, ಸುಮಾರು 1,08,76,763ಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕಚೇರಿಯ ಆವರಣದಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು. ಈ ವೇಳೆ ಬಂಗಾರದ ಆಭರಣಗಳು, ಶ್ರೀಗಂಧ, ನಗದು ಹಣ, ಕ್ಯಾಮೆರಾ, ಮೊಬೈಲ್, ಮೆಣಸಿನಕಾಯಿ ತುಂಬಿದ ಲಾರಿ,ಬೈಕ್, ವಿದ್ಯುತ್ ತಂತಿ, ಸರಾಯಿ ಸೇರಿದಂತೆ ವಿವಿಧ ವಸ್ತುಗಳನ್ನು ಪೊಲೀಸರು ವಾರಸುದಾರರಿಗೆ ಹಸ್ತಾಂತರಿಸಿದರು.
28 ಲಕ್ಷ ರೂಪಾಯಿ ಮೌಲ್ಯದ ಮೆಣಸಿನಕಾಯಿ ಚೀಲ ತುಂಬಿದ ಲಾರಿ ಮತ್ತು 27 ಲಕ್ಷ ರೂಪಾಯಿ ಮೌಲ್ಯದ ಮೆಣಸಿನಕಾಯಿ ಪುಡಿ ಚೀಲ ಹೊಂದಿರುವ ಲಾರಿಗಳು ಪ್ರಮುಖ ಪ್ರಕರಣಗಳಾಗಿದ್ದು, ಲಾರಿ ಮಾಲೀಕರಿಗೆ ಬೀಗಗಳನ್ನು ಹಸ್ತಾಂತರಿಸಲಾಯಿತು. ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ವಾರಸುದಾರರಿಗೆ ಸ್ವತ್ತುಗಳನ್ನು ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಅವರು, ಈ ತಿಂಗಳಲ್ಲಿ ಪೊಲೀಸ್ ಇಲಾಖೆ ಅಪರಾಧ ತಡೆ ಮಾಸಾಚರಣೆ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲ ತಿಂಗಳಿಂದ ಪಶಪಡಿಸಿಕೊಂಡ ಹಾಗೂ ನ್ಯಾಯಾಲಯದ ಮುಕ್ತಾಯಗೊಂಡ ಪ್ರಕರಣಗಳ ವಸ್ತುಗಳನ್ನು ವಾರಸುದಾರರಿಗೆ ನೀಡಲಾಗುತ್ತಿದೆ. ಮನೆ ಮತ್ತು ಬೈಕ್ ಕಳ್ಳತನ ಪ್ರಕರಣಗಳಲ್ಲಿ ಸಾರ್ವಜನಿಕರ ನಿರ್ಲಕ್ಷ್ಯ ಪ್ರಮುಖ ಕಾರಣವಾಗಿದೆ. ಮನೆಯಲ್ಲಿ ಇಲ್ಲದ ವೇಳೆ ಸೂಕ್ತ ಜಾಗೃತಿ ಕೈಗೊಂಡರೆ ಮನೆ ಕಳ್ಳತನ ತಪ್ಪಿಸಬಹುದು ಎಂದು ತಿಳಿಸಿದರು.
ದ್ವಿಚಕ್ರವಾಹನಗಳ ಕಳ್ಳತನ ಪ್ರಕರಣಗಳಲ್ಲಿ ಸಹ ಬೈಕ್ ಇಗ್ನಿಷನ್ ಮಾತ್ರ ಬಂದ್ ಮಾಡಿದರೆ ಸಾಲದು. ಹ್ಯಾಂಡ್ ಲಾಕ್ ಮಾಡಿದರೆ ಹೆಚ್ಚಿನ ಬೈಕ್ ಕಳ್ಳತನ ಪ್ರಕರಣ ತಡೆಗಟ್ಟಬಹುದು. ಪೊಲೀಸರೊಂದಿಗೆ ಸಹಕರಿಸುವ ಮೂಲಕ ಪೊಲೀಸ್ ಅಧಿಕಾರಿಗಳಿಗೆ ತನಿಖೆಯಲ್ಲಿ ಸಹಾಯ ಮಾಡಬೇಕೆಂದು ಸಾರ್ವಜನಿಕರಲ್ಲಿ ಹನುಮಂತರಾಯರವರು ಮನವಿ ಮಾಡಿದರು.
ಇದನ್ನೂ ಓದಿ: ಬೇಲಿಯೇ ಎದ್ದು ಹೊಲ ಮೇಯ್ದೆಡೆ.. ಮನೆ ಕಳ್ಳತನ ಗ್ಯಾಂಗ್ಗೆ ಸೆಕ್ಯೂರಿಟಿ ಗಾರ್ಡ್ ಲೀಡರ್...