ಹಾವೇರಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಮೊದಲ ಅಸ್ತ್ರ ಅಂದ್ರೆ ಅದು ಲಸಿಕೆ. ಆದರೆ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ನಿಧಾನಗತಿಯಲ್ಲಿ ಸಾಗುತ್ತಿದೆ. ಕೊರೊನಾ ಲಸಿಕೆ ಹಾಕುವುದರಲ್ಲಿ ಹಾವೇರಿ ಜಿಲ್ಲೆ ರಾಜ್ಯದಲ್ಲೇ ಕೊನೆಯ ಸ್ಥಾನದಲ್ಲಿದೆ. ಜನರೇನೋ ಲಸಿಕೆ ಹಾಕಿಸಿಕೊಳ್ಳಲು ನಾ ಮುಂದು ತಾ ಮುಂದು ಎಂದು ಉತ್ಸಾಹ ತೋರಿಸುತ್ತಿದ್ದಾರೆ. ಜತೆಗೆ ಆರೋಗ್ಯ ಸಿಬ್ಬಂದಿಯೂ ಸಹ ಲಸಿಕೆ ಕಾರ್ಯಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ಜಿಲ್ಲೆಗೆ ಲಸಿಕೆ ಕೊರತೆ ದೊಡ್ಡ ಸಮಸ್ಯೆಯಾಗಿದೆ.
ಸದ್ಯ ಕೋವಿಡ್ 3ನೇ ಅಲೆ ಭೀತಿ ಕಾಡುತ್ತಿದೆ. ಲಸಿಕೆ ಪಡೆದರೆ ಸೂಕ್ತ ಎಂಬುದು ಜನರಿಗೂ ಮನವರಿಕೆಯಾಗಿದೆ. ಈ ಮೊದಲು ಸಿಎಂ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಗೆ ಉಸ್ತುವಾರಿಯಾಗಿದ್ದರು. ಆದರೂ ಜಿಲ್ಲೆಯಲ್ಲಿ ಲಸಿಕೆ ಕಾರ್ಯ ನಿಧಾನಗತಿಯಲ್ಲಿ ಸಾಗಿತ್ತು. ಆದರೀಗ ಬೊಮ್ಮಾಯಿ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಮುಖ್ಯಮಂತ್ರಿ ಪ್ರತಿನಿಧಿಸುವ ಜಿಲ್ಲೆಯೇ ಲಸಿಕೆ ಹಾಕುವುದರಲ್ಲಿ ರಾಜ್ಯದಲ್ಲಿ ಕೊನೆಯ ಸ್ಥಾನದಲ್ಲಿದೆ ಅಂದ್ರೆ ಅಚ್ಚರಿಯಾಗುತ್ತೆ. ಜಿಲ್ಲೆಯಲ್ಲಿ ಈವರೆಗೆ ಶೇ.48ರಷ್ಟು ಮಾತ್ರ ಲಸಿಕಾಕರಣವಾಗಿದೆ.
ಜಿಲ್ಲೆಯಲ್ಲಿ ಈವರೆಗೆ 5,94,380 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಇನ್ನೂ ಜಿಲ್ಲೆಯಲ್ಲಿ ಶೇ.52ರಷ್ಟು ಮಂದಿಗೆ ಲಸಿಕೆ ನೀಡುವುದು ಬಾಕಿ ಉಳಿದಿದೆ. ಮೊದಲ ಡೋಸ್ ಪಡೆದವರ ಸಂಖ್ಯೆ ಹೆಚ್ಚಿದ್ದು 2ನೇ ಡೋಸ್ ಪಡೆದವರ ಸಂಖ್ಯೆ ಕಡಿಮೆಯಾಗಿದೆ.
ಸರ್ಕಾರ ಈ ಮೊದಲು ಹಾವೇರಿಗೆ 4 ಸಾವಿರ ಲಸಿಕೆ ನೀಡುತ್ತಿತ್ತು. ಕಳೆದೆರಡು ದಿನದಿಂದ ಈ ಸಂಖ್ಯೆ 14 ಸಾವಿರಕ್ಕೆ ಏರಿಕೆಯಾಗಿದೆ. ಹೀಗಾಗಿ ಇನ್ನೇನು ಕೆಲವು ದಿನಗಳಲ್ಲಿ ಹಾವೇರಿಯೂ ಸಹ ಲಸಿಕೆ ಕಾರ್ಯದಲ್ಲಿ ಉತ್ತಮ ಫಲಿತಾಂಶ ಕಂಡುಕೊಳ್ಳುವ ನಿರೀಕ್ಷೆ ಇದೆ.