ಹಾವೇರಿ: ಸ್ವಾತಂತ್ರ್ಯ ಹೋರಾಟಗಾರರ ಆಸ್ತಿ ವಶಪಡಿಸಿಕೊಂಡಿದ್ದಕ್ಕೆ ಹಣ ಪಾವತಿಸದ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿಯ ವಾಹನ ಜಪ್ತಿ ಮಾಡಲಾಗಿದೆ. ವಾಹನ ಜಪ್ತಿ ಮಾಡಿ 20 ದಿನವಾದರೂ ಅಧಿಕಾರಿಗಳ ಸುಳಿವಿಲ್ಲ. ನ್ಯಾಯಾಲಯ ಶುಕ್ರವಾರ ಉಪವಿಭಾಗಾಧಿಕಾರಿಯ ಬಂಧನಕ್ಕೆ ವಾರೆಂಟ್ ಹೊರಡಿಸಿದೆ.
ಸ್ವಾತಂತ್ರ್ಯ ಹೋರಾಟಗಾರ ಸಿದ್ದಪ್ಪ ಹೊಸಮನಿ ಅವರ ಜಮೀನನ್ನು ಸರ್ಕಾರ 1967ರಲ್ಲಿ ರಸ್ತೆಗಾಗಿ ವಶಪಡಿಸಿಕೊಂಡಿತ್ತು. ಆದರೆ ಅದಕ್ಕೆ ನಿಗದಿಪಡಿಸಿದ್ದ ಪರಿಹಾರವನ್ನು ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಿದ್ದಪ್ಪ ಹೊಸಮನಿ ವಂಶಸ್ಥರು 2012ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಜಿಲ್ಲಾ ನ್ಯಾಯಾಲಯ, ಹೈಕೋರ್ಟ್ ಈ ಕುರಿತಂತೆ ಆದೇಶ ಹೊರಡಿಸಿತ್ತು. ಹೊಸಮನಿ ವಂಶಸ್ಥರಿಗೆ ಸುಮಾರು 1 ಕೋಟಿ 30 ಲಕ್ಷ ರೂಪಾಯಿ ಹಣ ನೀಡುವಂತೆ ನ್ಯಾಯಾಲಯಗಳು ಆದೇಶ ನೀಡಿದ್ದವು. ಹಾವೇರಿಯ ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗೆ ಹಣ ತಲುಪಿಸುವಂತೆ ಆದೇಶ ನೀಡಲಾಗಿತ್ತು.
ಆದರೆ ಅಂದಿನಿಂದ ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳನ್ನು ಹೊಸಮನಿ ಕುಟುಂಬದ ಸದಸ್ಯರು ಭೇಟಿಯಾದರೂ ಸಹ ಹಣ ನೀಡಿರಲಿಲ್ಲ. ಮೊದಲು 1 ಕೋಟಿ 30 ಲಕ್ಷವಿದ್ದ ಪರಿಹಾರ ಹಣ ಈಗ 1 ಕೋಟಿ 91 ಲಕ್ಷಕ್ಕೇರಿದೆ. ಆದರೆ ಈ ಹಣ ನೀಡದೆ ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿ ಪ್ರತಿ ಸಲ ಬೇರೆ ಬೇರೆ ಕಾರಣಗಳನ್ನು ನೀಡುತ್ತಿದ್ದರು. ಇದರಿಂದ ನೊಂದ ಹೊಸಮನಿ ಸಂಬಂಧಿಕರು ಮತ್ತೆ ಜಿಲ್ಲಾ ನ್ಯಾಯಾಲಯದ ಮೆಟ್ಟೆಲೇರಿದ್ದರು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಕಳೆದ 20 ದಿನಗಳ ಹಿಂದೆ ಹಾವೇರಿ ಉಪವಿಭಾಗಾಧಿಕಾರಿಯ ವಾಹನ ಜಪ್ತಿ ಮಾಡುವಂತೆ ಆದೇಶಿಸಿತ್ತು. ಅದರಂತೆ ಉಪವಿಭಾಗಾಧಿಕಾರಿ ವಾಹನ ಜಪ್ತಿ ಮಾಡಿ 20 ದಿನವಾದರೂ ಅಧಿಕಾರಿಗಳು ಇತ್ತ ಸುಳಿದಿಲ್ಲ.
ಇದರಿಂದ ಬೇಸತ್ತ ನ್ಯಾಯಾಲಯ ಶುಕ್ರವಾರ ಉಪವಿಭಾಗಾಧಿಕಾರಿಯ ಬಂಧನಕ್ಕೆ ವಾರೆಂಟ್ ಸಹ ಹೊರಡಿಸಿದೆ. ಹೊಸಮನಿ ಸಂಬಂಧಿಕರ ಪರವಾಗಿ ನ್ಯಾಯವಾದಿ ಅಶೋಕ ನೀರಲಗಿ ವಾದ ನಡೆಸಿದ್ದರು. ಈಗಲಾದರೂ ತಮಗೆ ಪರಿಹಾರ ಧನ ಸಿಗುತ್ತಾ ಎಂದು ಸಿದ್ದಪ್ಪ ಹೊಸಮನಿ ಸಂಬಂಧಿಕರು ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ: ರಮೇಶ್ ಕುಮಾರ್ ವಿವಾದಿತ ಹೇಳಿಕೆಗೆ ಡಿಕೆಶಿ ಖಂಡನೆ.. ಮಹಿಳಾ ಸಮುದಾಯಕ್ಕೆ ಕ್ಷಮೆ ಕೋರಿದ ಕೆಪಿಸಿಸಿ ಅಧ್ಯಕ್ಷ
ಸಿದ್ದಪ್ಪ ಹೊಸಮನಿ ಹಾವೇರಿ ಜಿಲ್ಲೆಯ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿದ್ದರು. ಅಂದಿನ ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವರು ಹಾವೇರಿ ಜಿಲ್ಲಾ ಕ್ರೀಡಾಂಗಣ ಸೇರಿದಂತೆ ವಿವಿಧ ಕಚೇರಿಗಳಿಗೆ ತಮ್ಮ ಜಮೀನನ್ನು ದಾನ ಮಾಡಿದ್ದರು.