ಹಾವೇರಿ: ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಹಾವೇರಿ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣನವರ್ ತಿಳಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು ಚುನಾವಣೆಗೆ ಆಯೋಗದ ನಿಯಮದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 23,274 ಮತದಾರರಿದ್ದು, ಮತದಾನಕ್ಕಾಗಿ 37 ಮತಗಟ್ಟೆ ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದರು.
ಕೋವಿಡ್ ಇರುವ ಕಾರಣ ಚುನಾವಣೆ ಆಯೋಗ ವಿಶೇಷ ನಿಯಮಗಳನ್ನು ಹೊರಡಿಸಿದ್ದು, ಅದರಂತೆ ಮತದಾನಕ್ಕಿಂತ ಮೊದಲು ಮತದಾರರಿಗೆ ಕಡ್ಡಾಯವಾಗಿ ಸ್ಯಾನಿಟೈಜರ್, ಮಾಸ್ಕ್ ಮತ್ತು ಪಲ್ಸ್ ಆಕ್ಸಿಮೀಟರ್ ಹಾಗೂ ಜ್ವರ ತಪಾಸಣೆ ನಡೆಸಲಾಗುವುದು. ಗುರುವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ನಾಮಪತ್ರ ಸಲ್ಲಿಸಲು 8ನೇ ತಾರೀಖು ಕೊನೆಯ ದಿನವಾಗಿದೆ. 9 ರಿಂದ ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು 12ನೇ ತಾರೀಖು ಕೊನೆಯ ದಿನವಾಗಿದೆ. 28 ರಂದು ಮತದಾನ ನಡೆಯಲಿದ್ದು, ನವೆಂಬರ್ 02 ರಂದು ಮತ ಏಣಿಕೆ ನಡೆಯಲಿದೆ ಎಂದು ತಿಳಿಸಿದರು.