ಹಾವೇರಿ: ಸಾರಿಗೆ ಇಲಾಖೆ ನೌಕರರ ಮುಷ್ಕರ ಎರಡನೇ ದಿನವು ಮುಂದುವರೆದಿದೆ. ಪರಿಣಾಮ ಹಾವೇರಿ ಜಿಲ್ಲಾ ಕೇಂದ್ರ ಬಸ್ ನಿಲ್ದಾಣ ಪ್ರಯಾಣಿಕರು ಇಲ್ಲದೆ ಬಿಕೋ ಎನ್ನುತ್ತಿತ್ತು.
ಇಂದು ಪ್ರಯಾಣಿಕರ ಸಂಖ್ಯೆ ಸಹ ಕಡಿಮೆಯಾಗಿದ್ದು, ಖಾಸಗಿ ವಾಹನಗಳ ಅಬ್ಬರ ಸಹ ಕಡಿಮೆಯಾಗಿತ್ತು. ಕಡಿಮೆ ಸಂಖ್ಯೆಯಲ್ಲಿದ್ದ ಖಾಸಗಿ ವಾಹನಗಳು ಪ್ರಯಾಣಿಕರಿಗಾಗಿ ಮುಗಿಬೀಳುತ್ತಿದ್ದ ದೃಶ್ಯ ಕಂಡುಬಂತು. ಈ ಮಧ್ಯೆ ಬಸ್ ನಿಲ್ದಾಣದ ಮಳಿಗೆಗೆಳನ್ನ ಬಾಡಿಗೆ ಪಡೆದ ವ್ಯಾಪಾರಿಗಳು ತೀವ್ರ ಆತಂಕ ವ್ಯಕ್ತಪಡಿಸಿದರು. ಪ್ರತಿ ಬಾರಿ ಮುಷ್ಕರವಾದಾಗ ಇದೇ ರೀತಿಯಾಗುತ್ತೆ. ಪ್ರಯಾಣಿಕರು ಇಲ್ಲದೆ ತಮಗೆ ವ್ಯಾಪಾರವಾಗುವುದಿಲ್ಲ.
ಆದರೆ ಸಾರಿಗೆ ಇಲಾಖೆ ತಮ್ಮ ಅಂಗಡಿಗಳ ಬಾಡಿಗೆ ಕಡಿಮೆ ಮಾಡುವುದಿಲ್ಲ. ಬದಲಿಗೆ ದಿನಕ್ಕೆ ಸಾವಿರ, ಎರಡು ಸಾವಿರ ರೂಪಾಯಿ ಬಾಡಿಗೆ ಕಟ್ಟುವ ಅನಿವಾರ್ಯತೆ ಇದೆ. ಸಾರಿಗೆ ಇಲಾಖೆ ನೌಕರರು ಮತ್ತು ಸರ್ಕಾರದ ನಡುವಿನ ಸಮಸ್ಯೆಗೆ ನಾವು ನಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಸಾರಿಗೆ ಇಲಾಖೆ ಮುಷ್ಕರ ನಡೆಯುವ ದಿನಗಳಲ್ಲಿ ತಮ್ಮ ಬಾಡಿಗೆ ಸಹ ಪಡೆಯದಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ವರ್ತಕರು ಮನವಿ ಮಾಡಿದ್ದಾರೆ.