ಹಾವೇರಿ: ಜಿಲ್ಲೆಯಾದ್ಯಂತ ನಿನ್ನೆ (ಶನಿವಾರ) ಹನುಮ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಜಿಲ್ಲೆಯ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯಲ್ಲಿ ಆಂಜನೇಯನಿಗೆ ಸ್ಥಳೀಯವಾಗಿ 'ಶಾಂತೇಶ' ಎಂದು ಕರೆಯಲಾಗುತ್ತದೆ. ಹನುಮ ಜಯಂತಿ ಅಂಗವಾಗಿ ಶಾಂತೇಶನಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಸನ್ನಿಧಾನದಲ್ಲಿ ಸಂಭ್ರಮ ಮನೆ ಮಾಡಿತ್ತು.
ಹನುಮ ಜಯಂತಿ ಅಂಗವಾಗಿ ಶಾಂತೇಶ ರಥೋತ್ಸವ ನಡೆಸಲಾಯಿತು. ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಕಲಾ ತಂಡಗಳ ಕಲಾ ಪ್ರದರ್ಶನ ಗಮನ ಸೆಳೆಯಿತು. ಹಾವೇರಿ ರೈಲು ನಿಲ್ದಾಣದ ಬಳಿಯ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿಯನ್ನ ವಿಶೇಷವಾಗಿ ಆಚರಿಸಲಾಯಿತು. ಹನುಮನಿಗೆ ಬೆಣ್ಣೆ ಮತ್ತು ಸುಮಾರು 5 ಕೆಜಿ ಪಿಸ್ತಾದಿಂದ ಅಲಂಕಾರ ಮಾಡಲಾಗಿತ್ತು. ಅಲ್ಲದೇ, ಶನಿವಾರ ಮುಂಜಾನೆ 6 ಗಂಟೆಗೆ ಹನುಮನ ಬಾಲ ಪ್ರತಿಮೆಯನ್ನ ತೊಟ್ಟಿಲಿಗೆ ಹಾಕಿ ತೂಗಲಾಯಿತು.
ಪ್ರತಿ ವರ್ಷ ವಿಶಿಷ್ಟವಾಗಿ ಅಲಂಕರಿಸಿ ಹನುಮ ಜಯಂತಿಯನ್ನ ಆಚರಿಸಲಾಗುತ್ತದೆ. ಹನುಮನಿಗೆ ಹಣ್ಣುಗಳೆಂದರೆ, ಎಲ್ಲಿಲ್ಲದ ಪ್ರೀತಿ. ಹೀಗಾಗಿ ಒಣ ಹಣ್ಣುಗಳಿಂದ ಸಿಂಗರಿಸಿ ಹನುಮನಿಗೆ ಪೂಜೆ ಸಲ್ಲಿಸಲಾಗುತ್ತದೆ. ಹನುಮನಿಗೆ ಶ್ರಾವಣ ಮಾಸದಲ್ಲಿ ಬಾದಾಮಿ, ಗೋಡಂಬಿ, ಏಲಕ್ಕಿ, ಲವಂಗ ಮತ್ತು ಅಂಜೂರು ಹಣ್ಣುಗಳಿಂದ ಸಿಂಗರಿಸಲಾಗುತ್ತದೆ. ಈ ರೀತಿಯ ಸಿಂಗರಿಸುವುದರಿಂದ ಹನುಮ ಭಕ್ತರಿಗೆ ಇಷ್ಟಾರ್ಥ ಕರುಣಿಸುತ್ತಾನೆ ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ ಎಂದು ಅರ್ಚಕ ಲಕ್ಷ್ಮಣ ಅವಘಾನ ತಿಳಿಸಿದರು.
ಹನುಮ ಜಯಂತಿ ಅಂಗವಾಗಿ ದೇವಸ್ಥಾನವನ್ನು ತಳಿರು-ತೋರಣಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಆಂಜನೇಯನಿಗೆ ಮಾಡಿದ್ದ ಅಲಂಕಾರವನ್ನ ಕಣ್ತುಂಬಿಕೊಂಡು ಪೂಜೆ ಸಲ್ಲಿಸಿದರು.
ಇದನ್ನೂ ಓದಿ: ವಿಜಯಪುರ: ಅದ್ಧೂರಿಯಾಗಿ ನೆರವೇರಿದ ಗೊಲ್ಲಾಳೇಶ್ವರ ಮಹಾರಥೋತ್ಸವ