ಹಾವೇರಿ: ಮಾಜಿ ಸಚಿವ ಸಿ.ಎಂ.ಉದಾಸಿ ನಿಧನದಿಂದ ತೆರವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಈ ನಡುವೆ ಇಂದು ಬೆಂಗಳೂರಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಮಹತ್ವದ ಕೋರ್ ಕಮಿಟಿ ಸಭೆ ನಡೆಯುತ್ತಿದೆ.
ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಯಿಂದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ನಡುವೆ ಹಾನಗಲ್ ಕ್ಷೇತ್ರದಿಂದ ಸಿ.ಎಂ.ಉದಾಸಿ ಪತ್ನಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿದೆ.
ಕೋರ್ ಕಮಿಟಿ ಸಭೆಯಲ್ಲಿ ಶಿವಕುಮಾರ್ ಉದಾಸಿ ಸೊಸೆ ಹಾಗೂ ಪತ್ನಿಗೆ ಟಿಕೆಟ್ ನೀಡುವ ಕುರಿತಂತೆ ಚರ್ಚೆ ನಡೆಯಲಿದ್ದು, ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಲಿದ್ದಾರೆ. ಅಲ್ಲದೇ, ಈಗಾಗಲೇ ಅರ್ಜಿ ಸಲ್ಲಿಸಿರುವ 17ಕ್ಕೂ ಅಧಿಕ ಆಕಾಂಕ್ಷಿಗಳ ಕುರಿತಂತೆಯೂ ಚರ್ಚೆ ನಡೆಯಲಿದೆ. ಈ ಹಿಂದೆ ಬೆಳಗಾವಿ ಸಂಸದರಾಗಿದ್ದ ಸುರೇಶ್ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಿದ್ದ ಬಿಜೆಪಿ ಇದೀಗ ಉದಾಸಿ ಕುಟುಂಬಸ್ಥರಿಗೂ ನೀಡಲಿದೆ ಎನ್ನಲಾಗಿದೆ.
ಕಾಂಗ್ರೆಸ್ನಲ್ಲೂ ಜಿದ್ದಾಜಿದ್ದಿ:
ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಹಾನಗಲ್ ಕ್ಷೇತ್ರದಲ್ಲಿ 4 ಬಾರಿ ಶಾಸಕರಾಗಿರುವ ಮನೋಹರ್ ತಹಶೀಲ್ದಾರ್ ಮತ್ತು ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಶ್ರೀನಿವಾಸ ಮಾನೆ ನಡುವೆ ಅಭ್ಯರ್ಥಿ ಆಯ್ಕೆಯಲ್ಲಿ ಪೈಪೋಟಿ ನಡೆದಿದೆ.
ಶ್ರೀನಿವಾಸ ಮಾನೆ ಹೊರಗಿನವರು, ಸ್ಥಳೀಯರಾದ ನಮಗೆ ಟಿಕೆಟ್ ನೀಡಬೇಕು ಎಂದು ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಪಟ್ಟು ಹಿಡಿದಿದ್ದಾರೆ. ಆದರೆ ಕಳೆದ ಬಾರಿ ಚುನಾವಣೆಯಲ್ಲಿ ಸಿ.ಎಂ.ಉದಾಸಿ ವಿರುದ್ಧ ಅಲ್ಪ ಮತಗಳ ಅಂತರದಲ್ಲಿ ಸೋತಿದ್ದೇನೆ. ಈ ಬಾರಿ ಟಿಕೆಟ್ ನೀಡಿದರು ಗೆಲ್ಲುವುದು ನಾನೇ ಎಂದು ಶ್ರೀನಿವಾಸಮಾನೆ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಈ ಇಬ್ಬರು ನಾಯಕರೂ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರನ್ನು ಭೇಟಿಯಾಗಿದ್ದಾರೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇದೇ 7ರಂದು ಹಾನಗಲ್ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ, ಶ್ರೀನಿವಾಸ ಮಾನೆ ಮತ್ತು ಮನೋಹರ್ ತಹಶೀಲ್ದಾರ್ ಹಾಗೂ ಇತರರ ಸ್ಪರ್ಧೆ ಕುರಿತಂತೆ ಹೈಕಮಾಂಡ್‌ಗೆ ಪಟ್ಟಿ ಕಳುಹಿಸಲಾಗಿದೆ.
ಇದನ್ನೂ ಓದಿ: ಕೋರ್ ಕಮಿಟಿ ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಹೆಸರು ಅಂತಿಮ: ಅರುಣ್ ಸಿಂಗ್