ಹಾನಗಲ್ (ಹಾವೇರಿ): ಕೊರೊನಾ ಎಫೆಕ್ಟ್ನಿಂದ ಪದವೀಧರ ಉದ್ಯೋಗಿಗಳಿಗೆ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೊಡುವ ಉದ್ಯೋಗ ಖಾತ್ರಿ ಕೆಲಸವೇ ಗತಿಯಾಗಿದೆ. ನರೇಗಾ ಯೋಜನೆಯಲ್ಲಿ ಸಿಗುವ ಈ ಕೂಲಿಯ ಮೊರೆ ಹೋಗಿರುವ ಪದವೀಧರರು, ಗುದ್ದಲಿ, ಸಲಕೆ ಕೈಯಲ್ಲಿ ಹಿಡಿಯುತ್ತಿದ್ದಾರೆ.
ಹಾನಗಲ್ ತಾಲೂಕಿನ ಮಲಗುಂದ ಗ್ರಾಮದ ವಿನಾಯಕ ಸಾತೇನಹಳ್ಳಿ ಎಂಬ ಎಂ.ಎ. ಪದವೀಧರ, ಚಿಕ್ಕಬಾಸುರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕನಾಗಿದ್ದಾರೆ. ಆದರೆ ಕೊರೊನಾ ಪರಿಣಾಮ ಎಲ್ಲಾ ಶಾಲಾ-ಕಾಲೇಜುಗಳು ಸಂಪೂರ್ಣ ಬಂದ್ ಆಗಿದ್ದರಿಂದ ಕೆಲಸವಿಲ್ಲದಂತಾಗಿದೆ. ಕುಟುಂಬದ ನಿರ್ವಹಣೆಯ ಹೊಣೆ ಹೊತ್ತಿದ್ದ ಯುವಕನಿಗೆ ಆಸರೆಯಾಗಿದ್ದು, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ. ಇದೀಗ ಗ್ರಾಮದಲ್ಲಿ ಕೆರೆ ಕಟ್ಟೆಗಳ ಕೆಲಸ ನಡೆಯುತ್ತಿದ್ದು, ವಿನಾಯಕ ಪ್ರತಿನಿತ್ಯ ಕೆಲಸಕ್ಕೆ ಹೋಗುತ್ತಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸರ್ಕಾರ ನಮ್ಮಂತಹ ಎಷ್ಟೋ ಉಪನ್ಯಾಸಕರನ್ನು ನಿರ್ಲಕ್ಷಿಸಿದೆ. ಎಲ್ಲಾ ಅತಿಥಿ ಉಪನ್ಯಾಸಕರಿಗೆ ಇದೀಗ ಸಮಸ್ಯೆಯಾಗಿದೆ. ಕೂಡಲೇ ಸರ್ಕಾರ ನಮ್ಮಂತಹ ಅತಿಥಿ ಉಪನ್ಯಾಸಕರ ನೆರವಿಗೆ ಬರಬೇಕು. ಸೇವಾ ಭದ್ರತೆಯನ್ನ ಒದಗಿಸಬೇಕೆಂದು ಆಗ್ರಹಿಸಿದರು.
ಮನರೆಗಾ ಯೋಜನೆ ನಮ್ಮಂತಹ ಎಷ್ಟೋ ನಿರುದ್ಯೋಗಿ ಯುವಕರ ಪಾಲಿಗೆ ಆಸರೆಯಾಗಿದೆ. ಸರಕಾರಿ ನೌಕರರಿಗೆ ಒದಗಿಸುವ ಭದ್ರತೆಗಳನ್ನ ಅತಿಥಿ ಉಪನ್ಯಾಸಕರಿಗೂ ಒದಗಿಸಬೇಕು ಎಂದು ಕೋರಿದರು.