ಹಾವೇರಿ: ಮಂಜೂರಾದ ಮನೆಯ ಜಿಪಿಎಸ್ ಮಾಡಿಸಿ ಕೊಡಲು ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯತ್ ಸದಸ್ಯನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಸವಣೂರು ತಾಲೂಕಿನ ಕಾರಡಗಿ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯ ಮಹಮ್ಮದ್ ಜಾಪರ್ ಸಂಶಿ ಬಂಧಿತ ಆರೋಪಿ.
ದಾದಾಪೀರ್ ಲೋಹರ್ ಎಂಬವರಿಗೆ ಸರ್ಕಾರದಿಂದ 5 ಲಕ್ಷ ರೂಪಾಯಿ ಮನೆ ಮಂಜೂರಾಗಿತ್ತು. ಈ ಮನೆಗೆ ಜಿಪಿಎಸ್ ಮಾಡಿಸಲು ಮಹಮ್ಮದ್ ಜಾಪರ್ ಸಂಶಿ 40 ಸಾವಿರ ರೂಪಾಯಿ ಲಂಚ ಬೇಡಿಕೆಯಿಟ್ಟದ್ದರು. 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಪ್ರಕರಣಗಳ ವರದಿ- ಪಂಚಾಯತ್ ಕಾರ್ಯದರ್ಶಿ ಅಮಾನತು: ಬೆಳೆ ಸಮೀಕ್ಷೆಯಲ್ಲಿ ಕರ್ತವ್ಯಲೋಪ ಎಸಗಿದ ಗ್ರಾಮ ಪಂಚಾಯತ್ ಕಾರ್ಯದರ್ಶಿಯನ್ನು ಅಮಾನತು ಮಾಡಿ ಹಾವೇರಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ಆದೇಶಿಸಿದ್ದಾರೆ. ಹಿರೇಕೆರೂರು ತಾಲೂಕಿನ ಚನ್ನಳ್ಳಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಕೆ.ಪಿ.ಮಾನೆ ಅಮಾನತಾದವರು.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆ ಸಮೀಕ್ಷೆಯಡಿ ದೂದಿಹಳ್ಳಿ ಗ್ರಾಮದ ಸಮೀಕ್ಷೆ ವೇಳೆ ಕರ್ತವ್ಯಲೋಪ ಎಸಗಿದ್ದರಿಂದ ಕೆ.ಪಿ.ಮಾನ್ ಅವರನ್ನು ಅಮಾನತುಗೊಳಿಸಲಾಗಿದೆ. "ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಜಿಲ್ಲೆಯಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸಬೇಕಾಗಿದ್ದ ಪಿಡಿಒ ಕರ್ತವ್ಯಲೋಪ ಎಸಗಿರುವುದು ದುರದೃಷ್ಟಕರ. ಭವಿಷ್ಯದಲ್ಲಿ ಉಳಿದ ಅಧಿಕಾರಿಗಳು ಕರ್ತವ್ಯಲೋಪ ಎಸಗದಂತೆ ಎಚ್ಚರಿಕೆ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ" ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೆಇಎ ನೇಮಕಾತಿ ಪರೀಕ್ಷೆ ಅಕ್ರಮದ ರೂವಾರಿ ಬಂಧನಕ್ಕೆ ತೆರಳಲು ತಡ ಮಾಡಿದ ಸಿಪಿಐ ಅಮಾನತು
ಲೋಕಾಯುಕ್ತ ಬಲೆಗೆ ಬಿದ್ದ ಶಿರಸ್ತೇದಾರ್: ಜಮೀನಿಗೆ ಸಂಬಂಧಪಟ್ಟ ದಾಖಲಾತಿ ಮಾಡಿಸಿಕೊಡಲು ಲಂಚದ ಬೇಡಿಕೆ ಇಟ್ಟಿದ್ದ ಚನ್ನಗಿರಿ ತಾಲೂಕು ಕಚೇರಿಯ ಶಿರಸ್ತೇದಾರ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇತ್ತೀಚೆಗೆ ದಾಳಿ ನಡೆಸಿದ್ದರು. ವ್ಯಕ್ತಿಯೊಬ್ಬರು ತನ್ನ ಸಂಬಂಧಿಕರಿಗೆ ಸಂಬಂಧಿಸಿದ ಜಮೀನಿಗೆ ದಾಖಲಾತಿ ಮಾಡಿಸುವ ಸಲುವಾಗಿ ಸರ್ಕಾರಿ ಕಚೇರಿಗೆ ಓಡಾಡುತ್ತಿದ್ದರು. ಈ ವೇಳೆ ಜಮೀನಿನ ಪಹಣಿ ಮತ್ತು ಆಕಾರ್ ಬಂದ್ ವಿಸ್ತೀರ್ಣ ತಾಳೆ ಸರಿಪಡಿಸಿಕೊಡಲು ಶಿರಸ್ತೇದಾರ್ 5,000 ಲಂಚದ ಹಣದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿತ್ತು. ಲೋಕಾ ಪೊಲೀಸರು ಶಿರಸ್ತೇದಾರ್ ಲಂಚ ಸ್ವೀಕರಿಸುವಾಗ ಟ್ರ್ಯಾಪ್ ಮಾಡಿ ಬಂಧಿಸಿದ್ದರು.