ಹಾವೇರಿ: ಭಾರತ ದೇಶ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದ(75ನೇ ವರ್ಷ) ಹೊಸ್ತಿಲಲ್ಲಿದೆ. ಈ ಸಂಭ್ರಮಕ್ಕೆ ಕಾರಣವಾದವರು ಲೆಕ್ಕವಿಲ್ಲದಷ್ಟು ಸ್ವಾತಂತ್ರ ಹೋರಾಟಗಾರರು. ಇಂತಹ ವೀರಪುತ್ರರ ಪೈಕಿ ಜಿಲ್ಲೆಯ ಮೈಲಾರ ಮಹದೇವಪ್ಪ ಕೂಡಾ ಒಬ್ಬರು. ಉಪ್ಪಿನ ಸತ್ಯಾಗ್ರಹದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಇವರು ನಂತರ ಬ್ರಿಟೀಷರಿಗೆ ಸಿಂಹಸ್ವಪ್ನರಾಗಿದ್ದರು.
ರೈಲ್ವೆ ರೋಕೋ ಟಪಾಲ್ ಕಳ್ಳತನ ಮತ್ತು ಸುಂಕದ ಹಣ ಹೊಡೆಯುವ ಮೂಲಕ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದವರು ಮೈಲಾರ ಮಹದೇವಪ್ಪ. ಇವರಿಂದ ಸ್ಫೂರ್ತಿ ಪಡೆದು ಸಾವಿರಾರು ಸ್ವಾತಂತ್ರ ಹೋರಾಟಗಾರರು ಜಿಲ್ಲೆಯಲ್ಲಿ ಹುಟ್ಟಿಕೊಂಡಿದ್ದರು. ಇಂತಹ ಮಹಾನ್ ಚೇತನ 1943 ಏಪ್ರಿಲ್ 1ರಂದು ನಡೆದ ಬ್ರಿಟೀಷರ ಗುಂಡಿನ ದಾಳಿಯಲ್ಲಿ ಹುತಾತ್ಮರಾದರು. ಇವರ ಶವವನ್ನು ಹಾವೇರಿ ಹೊರಭಾಗದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದ್ದು ಸರ್ಕಾರ ವೀರಸೌಧ ನಿರ್ಮಿಸಿದೆ.
ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ಮೈಲಾರ ಮಹದೇವಪ್ಪ 1911ರ ಜೂನ್ 8 ರಂದು ಜನಿಸಿದ್ದರು. ಮಹಾತ್ಮ ಗಾಂಧೀಜಿ ನೇತೃತ್ವದ ದಂಡಿ ಉಪ್ಪಿನ ಸತ್ಯಾಗ್ರಹಕ್ಕೆ ರಾಜ್ಯದಿಂದ ಆಯ್ಕೆಯಾಗಿದ್ದ ಏಕೈಕ ವ್ಯಕ್ತಿಯೇ ಮಹದೇವಪ್ಪ.
ಮಹದೇವ ಹುಟ್ಟೂರಿಗೆ ಬಂದ ನಂತರ ಬ್ರಿಟೀಷರಿಗೆ ಸಿಂಹಸ್ವಪ್ನದಂತೆ ಕಾಡಿದರು. ಅಂದಿನ ಸರ್ಕಾರಗಳ ಟಪಾಲ್ ಕಳ್ಳತನ ಸೇರಿದಂತೆ ವಿವಿಧ ಅಸಹಾಕಾರ ಚಳವಳಿಯಲ್ಲಿ ಇವರು ಪಾಲ್ಗೊಂಡಿದ್ದರು. 1943ರ ಏಪ್ರಿಲ್ 1 ರಂದು ಹೊಸರಿತ್ತಿ ವೀರಭದ್ರೇಶ್ವರ ದೇವಸ್ಥಾನದಲ್ಲಿನ ತೆರಿಗೆ ಹಣಕ್ಕೆ ಮುತ್ತಿಗೆ ಹಾಕಿದಾಗ ಬ್ರಿಟೀಷರ ಗುಂಡೇಟಿಗೆ ಇವರು ವೀರ ಮರಣವನ್ನಪ್ಪುತ್ತಾರೆ. ಇವರ ಜೊತೆ ತಿರಕಪ್ಪ ಮಡಿವಾಳರ ಮತ್ತು ವೀರಯ್ಯ ಹಿರೇಮಠ ಅವರೂ ಹುತಾತ್ಮರಾದರು.
"ಇಂತಹ ಸ್ವಾತಂತ್ರ ಹೋರಾಟಗಾರ ನಮ್ಮ ಜಿಲ್ಲೆಯಲ್ಲಿ ಹುಟ್ಟಿದ್ದು ನಮ್ಮ ಹೆಮ್ಮೆ. ಪ್ರಸ್ತುತ ದಿನಗಳಲ್ಲಿ ದೇಶಾಭಿಮಾನ ಕುಗ್ಗುತ್ತಿದೆ, ಮೌಲ್ಯಗಳ ಅಪಮೌಲ್ಯೀಕರಣವಾಗುತ್ತಿವೆ. ಈ ಸಂದರ್ಭದಲ್ಲಿ ಸ್ವಾತಂತ್ರ ಹೋರಾಟಗಾರ ಹುತಾತ್ಮ ಮೈಲಾರ ಮಹದೇವ ಹೆಚ್ಚು ಪ್ರಸ್ತುತವಾಗುತ್ತಾರೆ."
- ಲೇಖಕಿ ಪುಷ್ಪಾ ಶೆಲವಡಿಮಠ
ಇದನ್ನೂ ಓದಿ: ಹಾವೇರಿ ರೈಲ್ವೆ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಮಹದೇವಪ್ಪ ಮೈಲಾರ ಹೆಸರು
ಮಹದೇವ ಹುತಾತ್ಮರಾಗುತ್ತಿದ್ದಂತೆ ಜನ ದಂಗೇಳುವ ಪರಿಸ್ಥಿತಿ ನಿರ್ಮಾಣವಾಗುತ್ತೆ. ಇದರಿಂದ ಹೆದರಿದ ಬ್ರಿಟೀಷರು ಮೈಲಾರ ಮಹದೇವ ಮತ್ತು ಅವರ ಜೊತೆ ಹುತಾತ್ಮರಾದ ತಿರಕಪ್ಪ ಮಡಿವಾಳರ ಮತ್ತು ವೀರಯ್ಯ ಹಿರೇಮಠ ಸೇರಿದಂತೆ ಮೂವರ ಶವಗಳನ್ನು ಹಾವೇರಿಯ ಹೊರವಲಯದಲ್ಲಿ ಒಂದೇ ಸಮಾದಿಯಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತೆ. ಜಿಲ್ಲಾಡಳಿತ ಇದೀಗ ಮೈಲಾರ ಮಹದೇವ ಟ್ರಸ್ಟ್ ರಚಿಸಿಕೊಂಡು ಅವರ ಧ್ಯೇಯಗಳನ್ನು ಜಾರಿಗೆ ತರುತ್ತಿದೆ.
ಮೈಲಾರ ಮಹದೇವಪ್ಪ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ವೀರಸೌಧ ನಿರ್ಮಿಸಲಾಗಿದೆ. ಮೈಲಾರ ಮಹದೇವರ ಸ್ಮರಣಾರ್ಥ ಮೈಲಾರ ಮಹದೇವಪ್ಪ ವೃತ್ತ ನಿರ್ಮಿಸಲಾಗಿದೆ. ಮೈಲಾರ ಸ್ಮರಣಾರ್ಥ ಕೇಂದ್ರ ಸರ್ಕಾರ 2018 ರಲ್ಲಿ ಅಂಚೆಚೀಟಿ ಬಿಡುಗಡೆ ಮಾಡಿದೆ. 2020 ರಲ್ಲಿ ಹಾವೇರಿ ರೈಲು ನಿಲ್ದಾಣಕ್ಕೆ ಮೈಲಾರ ಮಹದೇವ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ. ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ ಪಠ್ಯಪುಸ್ತಕಗಳಲ್ಲಿ ಮಹದೇವರ ದೇಶಪ್ರೇಮ ಹಸಿರಾಗಿ ಉಳಿದಿದೆ.