ಹಾವೇರಿ: ನಮ್ಮ ಬೆಂಬಿಲಿಗರು ಹಾಗೂ ಕಾರ್ಯಕರ್ತರ ಕಡೆಗಣನೆಯಿಂದ ಬೇಸತ್ತು ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಆಪ್ತರಾಗಿರುವ ಮಾಜಿ ಶಾಸಕ ಯು ಬಿ ಬಣಕಾರ ಹೇಳಿದರು.
ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವು ತಿಂಗಳುಗಳಿಂದ ಬೆಂಬಲಿಗರ ಒತ್ತಡವಿತ್ತು. ಹಾಗಾಗಿ ರಾಜೀನಾಮೆ ನೀಡಿದ್ದೇನೆ ಎಂದರು. ಇನ್ನು, ಮುಂದಿನ ಬಾರಿಯ ಚುನಾವಣೆಗೆ ಸ್ಪರ್ಧೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಸ್ಪರ್ಧಿಸಿದರೆ ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬುದರ ಕುರಿತು ಇನ್ನೂ ನಿರ್ಧಾರವಾಗಿಲ್ಲ ಎಂದು ತಿಳಿಸಿದರು.
ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ: ಈಗಾಗಲೇ ಹಲವರು ಹಲವು ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಏಳೆಂಟು ದಿನಗಳ ಕಾಲ ಬೆಂಬಲಿಗರು ಮತ್ತು ಅಭಿಮಾನಿಗಳ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ಬಿಜೆಪಿಯಲ್ಲಿ ನಮ್ಮ ಕಾರ್ಯಕರ್ತರಿಗೆ ಯಾವುದೇ ಬೆಲೆ ಸಿಗುತ್ತಿರಲಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರಬೇಕು ಎಂದರೆ ಅವರು ಬ್ಯುಸಿ ಆಗಿರುತ್ತಾರೆ. ಸಣ್ಣ ಸಣ್ಣ ವಿಷಯಗಳಿಗೆ ಅವರ ಬಳಿ ಹೋಗುವುದು ಸರಿಯಲ್ಲ ಎಂದು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಬಣಕಾರ ಸ್ಪಷ್ಟಪಡಿಸಿದರು.
ಸಚಿವ ಬಿ ಸಿ ಪಾಟೀಲ್ ವಿರುದ್ಧ ಪರೋಕ್ಷ ಕಿಡಿ.. ಪರೋಕ್ಷವಾಗಿ ಕೃಷಿ ಸಚಿವ ಬಿ ಸಿ ಪಾಟೀಲ್ ವಿರುದ್ಧ ಬಣಕಾರ ಆಕ್ರೋಶ ವ್ಯಕ್ತಪಡಿಸಿದರು. ಅಭಿಮಾನಿಗಳು ಹಾಗೂ ಕಾರ್ಯಕರ್ತರು ನನಗೆ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ಇಂತಹ ಸಮಯದಲ್ಲಿ ಚುನಾವಣೆಗೆ ನಿಲ್ಲುವುದಿಲ್ಲ ಅಂದರೆ ಬೆಂಬಲಿಗರು ನನ್ನನ್ನು ಬಿಡುವುದಿಲ್ಲ. ಏಳೆಂಟು ದಿನಗಳಲ್ಲಿ ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ. ನಾನು ಬಿಜೆಪಿ ರಾಜೀನಾಮೆ ಪ್ರಕಟಿಸಿದ ನಂತರ ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಯಡಿಯೂರಪ್ಪ ಅವರು ಸಂಪರ್ಕ ಮಾಡಿರಬಹುದು. ಆದರೆ ನನ್ನ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು ಎಂದು ಬಣಕಾರ ತಿಳಿಸಿದರು. ಇನ್ನು, ಉಪಚುನಾವಣೆ ಸಮಯದಲ್ಲಿ ಮುಂದಿನ ಬಿಜೆಪಿ ಟಿಕೆಟ್ ಬಗ್ಗೆ ಮಾತುಕತೆ ಆಗಿರಲಿಲ್ಲ ಎಂದು ಬಣಕಾರ ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ: ಸಚಿವ ಬಿ ಸಿ ಪಾಟೀಲ್ರಿಂದ ನನಗೆ ಕಿರುಕುಳ ಇತ್ತು: ರಾಜೀನಾಮೆ ಕುರಿತು ಮಾಜಿ ಶಾಸಕ ಯು ಬಿ ಬಣಕಾರ್ ಪ್ರತಿಕ್ರಿಯೆ