ಹಾವೇರಿ: ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕುಟುಂಬ ಸಮೇತರಾಗಿ ಭಾನುವಾರ ಹಾವೇರಿ ಸಿಂದಗಿ ಮಠಕ್ಕೆ ಭೇಟಿ ನೀಡಿದರು. ಸಿಂದಗಿ ಮಠದ ಶಾಂತವೀರೇಶ್ವರ ಗದ್ದುಗಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನನ್ನ ರಾಜಕೀಯ ಜೀವನಕ್ಕೆ ಆಶೀರ್ವಾದ ಮಾಡಿರುವ ಮಠ "ಸಿಂದಗಿಮಠ" ಎಂದು ತಿಳಿಸಿದರು.
ಟಿಕೆಟ್ ವಿಚಾರವನ್ನು ರಾಜ್ಯ, ರಾಷ್ಟ್ರೀಯ ಸಮಿತಿ ನಾಯಕರು ನಿರ್ಧರಿಸುತ್ತಾರೆ: 25 ವರ್ಷಗಳಿಂದ ನಾನು ಈ ಮಠದೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದೇನೆ. ಇದು ಸಮಾಜವನ್ನು ಒಂದೂಗೂಡಿಸುವ ಮಠ. ಲೋಕ ಕಲ್ಯಾಣರ್ಥವಾಗಿ ಹೋಮ ಹವನ ಮಾಡಿಸಬೇಕೆಂಬ ಇಚ್ಛೆ ಇತ್ತು. ಹೀಗಾಗಿ ಮಠಕ್ಕೆ ಬಂದಿದ್ದೇನೆ. ಇದೇ ವೇಳೆ ಪುತ್ರ ಕಾಂತೇಶ್ಗೆ ಹಾವೇರಿ ಲೋಕಸಭಾ ಕ್ಷೇತ್ರದ ಎಂಪಿ ಟಿಕೆಟ್ ನೀಡುವ ವಿಚಾರ ಕುರಿತಂತೆ ಮಾತನಾಡಿದ ಅವರು, ಯಾರಿಗೆ ಟಿಕೆಟ್ ಕೊಡಬೇಕು, ಬಿಡಬೇಕು ಎಂದು ಹೈಕಮಾಂಡ್ ನೋಡುತ್ತದೆ. ಟಿಕೆಟ್ ನೀಡುವ ವಿಚಾರದಲ್ಲಿ ರಾಜ್ಯ, ರಾಷ್ಟ್ರ ಸಮಿತಿಯರು ತೀರ್ಮಾನ ಮಾಡ್ತಾರೆ ಎಂದು ಸ್ಪಷ್ಟನೆ ನೀಡಿದರು.
ಪ್ರಧಾನಿ ಮೋದಿ ಅವರು ಕರೆ ಮಾಡಿದ್ದು ನಿಜ ಎಂದ ಈಶ್ವರಪ್ಪ: ಹಾಗೆ ನನಗೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೆ ಮಾಡಿದ್ದು ನಿಜ. ಚುನಾವಣಾ ರಾಜಕೀಯವಾಗಿ ದೂರ ಇರೋದು ಬೇಡ ಅಂದಿದ್ದರು. ಬಿಜೆಪಿ ಶಿಸ್ತಿನ ಪಕ್ಷ, ನಾವು ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡಿದ್ದೇವೆ. ಇದನ್ನು ತಿಳಿದು ಮೋದಿಯವರು ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾವೇರಿ ಲೋಕಸಭಾ ಹಾಲಿ ಸಂಸದ ಶಿವಕುಮಾರ್ ಉದಾಸಿ ನಾನು ಸ್ಪರ್ಧೆ ಮಾಡುವುದಿಲ್ಲ ಅಂದಿದ್ದಾರೆ. ಹೀಗಾಗಿ ಇಲ್ಲಿ ತಮ್ಮ ಪುತ್ರ ಕಾಂತೇಶ ಸ್ಪರ್ಧೆ ಮಾಡೋದು ಸೂಕ್ತ ಅನಿಸಿದೆ ಎಂದು ಮಾಜಿ ಸಚಿವ ಈಶ್ವರಪ್ಪ ಅಭಿಪ್ರಾಯಪಟ್ಟರು.
ಹಾವೇರಿ ಸಂಸದ ಕ್ಷೇತ್ರದಲ್ಲೂ ಅನೇಕ ನಾಯಕರು ಕೂಡಾ ಇದೇ ಅಭಿಪ್ರಾಯ ಹೇಳಿದ್ದಾರೆ, ಕಾಂತೇಶ್ ಸ್ಪರ್ಧೆ ಮಾಡುವಂತೆ ಮನವಿ ಕೂಡಾ ಮಾಡಿದ್ದಾರೆ. ಇಲ್ಲಿ ಎಲ್ಲರ ಅಪೇಕ್ಷೆ ಇದೆ, ಜೊತೆಗೆ ಎಲ್ಲಾ ಮಠಾಧೀಶರ ಆಶೀರ್ವಾದ ಕೂಡಾ ಇದೆ ಎಂದ ಈಶ್ವರಪ್ಪ, ಕಾಂಗ್ರೆಸ್ ಸರ್ಕಾರದ ಕಮಿಷನ್ ಆರೋಪ ಪ್ರತ್ಯಾರೋಪಗಳ ಕುರಿತಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ನಾನು ಮಠದಲ್ಲಿ ಇದ್ದೇನೆ. ರಾಜಕಾರಣದ ಬಗ್ಗೆ ನಾನು ಇಲ್ಲಿ ಮಾತನಾಡೊಲ್ಲಾ. ಆಮೇಲೆ ಮಾತಾಡುತ್ತೇನೆ ಎಂದು ತಮ್ಮ ಮಾತನ್ನು ಕೊನೆಗೊಳಿಸಿದರು.
ಇದನ್ನೂ ಓದಿ: ಬಿಡುಗಡೆಯಾಗಬೇಕಾದ ಬಿಲ್ಗಳಿಗೂ ಕಮಿಷನ್ ಕೇಳೋದು ಶುರುವಾಗಿದೆ: ಮಾಜಿ ಸಿಎಂ ಬೊಮ್ಮಾಯಿ