ಹಾವೇರಿ: ಹಿರೇಕೆರೂರಿಗೆ ಮತಪ್ರಚಾರಕ್ಕೆ ಆಗಮಿಸಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡುತ್ತಾ, ಹವಾ ಕ್ರಿಯೆಟ್ ಮಾಡಲು ನಾನಿಲ್ಲಿಗೆ ಬಂದಿಲ್ಲ, ಅನರ್ಹರಿಗೆ ಸೋಲುಣಿಸಲು ಬಂದಿರುವುದಾಗಿ ಎಚ್ಚರಿಸಿದರು.
ಮತಪ್ರಚಾರಕ್ಕೆ ಆಗಮಿಸಿ ಮಾತನಾಡಿದ ಅವರು, ಮಾಜಿ ಶಾಸಕ ಯು.ಬಿ.ಬಣಕಾರ ಬಹಳ ಸರಳ ವ್ಯಕ್ತಿ. ಬಣಕಾರರನ್ನ ಸಿಎಂ ಯಡಿಯೂರಪ್ಪ ಹರಕೆಯ ಕುರಿ ಮಾಡಿದ್ದಾರೆ ಎಂದರು.
ಹದಿನೈದು ಜನರು ರಾಜೀನಾಮೆ ಕೊಟ್ಟು ಯಡಿಯೂರಪ್ಪ ಇತಿಹಾಸ ಸೃಷ್ಟಿ ಮಾಡಿದ್ದಾರೆ. ದೊಡ್ಡ ದೊಡ್ಡವರು ಸೇರಿ ಆಪರೇಶನ್ ಕಮಲ ಮಾಡಿದ್ದಾರೆ. ನಾನು ಭವಿಷ್ಯ ಹೇಳೋದಿಲ್ಲ. ಯಡಿಯೂರಪ್ಪರ ಹಾಗೆ ಗಂಟೆ, ಘಳಿಗೆ ಫಿಕ್ಸ್ ಮಾಡೋದಿಲ್ಲ. ಹದಿನೈದು ಕ್ಷೇತ್ರದಲ್ಲೂ ಅನರ್ಹರು ಸೋಲ್ತಾರೆ. ಡಿಸೆಂಬರ್ 3ರ ನಂತರ ಪ್ರೆಸ್ ಕಾನ್ಫರೆನ್ಸ್ ಮಾಡ್ತೇನೆ ಎಂದು ಡಿಕೆಶಿ ಸೂಚ್ಯವಾಗಿ ತಿಳಿಸಿದರು.
ದೇವೇಗೌಡರು 60 ವರ್ಷ ರಾಜಕಾರಣ ಮಾಡಿದ್ದಾರೆ. ಜನರ ನಾಡಿಮಿಡಿತ ಅವರಿಗೆ ಗೊತ್ತಿದೆ. ದ್ರೋಹಿಗಳಿಗೆ ಪಾಠ ಕಲಿಸೋದು ಒಂದೇ ಅವರ ಗುರಿ ಎಂದು ಅವರು ಇದೇ ವೇಳಿ ಹೇಳಿದ್ರು.
ಯಡಿಯೂರಪ್ಪ ಆಫರ್ ಕೊಟ್ಟಿದ್ರು ಅಂದಿದ್ದ ಬಿ.ಸಿ.ಪಾಟೀಲನೇ ಕೈಕೊಟ್ಟು ಬಿಜೆಪಿಗೆ ಹೋಗಿದ್ದಾನೆ. ಈಗ ಅವರ ಒಳಗುಟ್ಟು ಎಲ್ಲವೂ ಆಚೆ ಬಂದಿದೆ. ಗುಟ್ಟನ್ನು ಬಹಳ ದಿನ ಮುಚ್ಚಿಡಲು ಆಗೋದಿಲ್ಲ. ಬಿ.ಸಿ.ಪಾಟೀಲ್ ಮತ ಮಾರಿಕೊಂಡಿದ್ದಾರೆ ಎಂದು ಜನರು ಒಂದಾಗಿದ್ದಾರೆ. ಪಕ್ಷಭೇದ, ಜಾತಿ ಭೇದ ಮರೆತು ಜನರು ಅನರ್ಹರ ವಿರುದ್ಧ ಒಗ್ಗಟ್ಟಾಗಿದ್ದಾರೆ. ಹದಿನೈದು ಜನರನ್ನೂ ಸೋಲಿಸಬೇಕು ಅಂತಾ ಜನರು ಪಣತೊಟ್ಟಿದ್ದಾರೆ ಎಂದು ಡಿಕೆಶಿ ತಿಳಿಸಿದ್ರು.