ಹಾವೇರಿ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಪ್ರವಾಹವೇನೋ ತಗ್ಗುತ್ತಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ನದಿಗಳ ರಭಸವೂ ಕಡಿಮೆಯಾಗಿದೆ. ಆದರೆ ಪ್ರವಾಹದಿಂದ ಹಾಳಾದ ಬೆಳೆಗಳನ್ನು ರೈತರು ಬೇಸರದಿಂದ ತೆಗೆಯುತ್ತಿದ್ದಾರೆ.
ಪ್ರವಾಹ ಪರಿಸ್ಥಿತಿ ತಂದೊಡ್ಡಿದ್ದ ವರದಾ, ಧರ್ಮಾ, ಕುಮುಧ್ವತಿ ಮತ್ತು ತುಂಗಭದ್ರಾ ನದಿಗಳ ಪ್ರವಾಹ ಇಳಿಮುಖವಾಗುತ್ತಿದೆ. ಈ ನಾಲ್ಕು ನದಿಗಳು ಜಿಲ್ಲೆಯಲ್ಲಿ ಹಲವು ಕುಟುಂಬಗಳನ್ನು ನಿರಾಶ್ರಿತರನ್ನಾಗಿ ಮಾಡಿವೆ.
ಇದೀಗ ದಿನನಿತ್ಯ ಮುಂಜಾನೆ ಬೇಗನೆ ಬಂದು ಜಮೀನಿನಲ್ಲಿ ಹಾಳಾಗಿ ನಿಂತಿರುವ ಬೆಳೆ ತೆಗೆಯುವುದೇ ರೈತರಿಗೆ ಕಾಯಕವಾಗಿದೆ. ಪ್ರವಾಹ ಪೂರ್ತಿಯಾಗಿ ಇಳಿಮುಖವಾದ ನಂತರ ಭೂಮಿ ಹದ ನೋಡಿಕೊಂಡು ಬಿತ್ತನೆ ಮಾಡುವ ಚಿಂತನೆಯಲ್ಲಿದ್ದಾರೆ ರೈತರು. ಇನ್ನೊಂದೆಡೆ, ಪ್ರವಾಹದಿಂದ ಜಿಲ್ಲೆಯಲ್ಲಿ ಸಾಕಷ್ಟು ರಸ್ತೆಗಳು ಹಾಳಾಗಿವೆ. ಕೆಲವು ರಸ್ತೆಗಳು ಬಿರುಕುಬಿಟ್ಟಿವೆ. ಈ ರಸ್ತೆಗಳಲ್ಲಿ ದೊಡ್ಡ ವಾಹನಗಳಿರಲಿ, ದ್ವಿಚಕ್ರ ವಾಹನ ಸಂಚರಿಸುವುದು ಕೂಡಾ ಕಷ್ಟಕರವಾಗಿದೆ.
ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿದ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಹಾಗಾಗಿ, ಸರ್ಕಾರ ರೈತರಿಗೆ ಪರಿಹಾರ ನೀಡಬೇಕು. ಎಕರೆಗೆ ನೂರು ಸಾವಿರದ ಬದಲು ಕನಿಷ್ಟಪಕ್ಷ ಬಿತ್ತನೆ ಬೀಜ, ಗೊಬ್ಬರಕ್ಕಾದರೂ ಸಾಲುವಷ್ಟು ಪರಿಹಾರ ನೀಡಲಿ ಅನ್ನೋದು ರೈತರ ಆಗ್ರಹವಾಗಿದೆ.