ಹಾವೇರಿ : ಪ್ರಮುಖ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರವು ವಾಪಸ್ ಪಡೆಯುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ವೇಳೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವುದಾಗಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಪೂಜಾರ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು ಸುಮಾರು 500 ಅಧಿಕ ರೈತರು ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ರವಾನಿಸಿದರು. ಕೇಂದ್ರ ಸರ್ಕಾರ ವಾಪಸ್ ಪಡೆದಂತೆ ರಾಜ್ಯ ಸರ್ಕಾರ ಸಹ ರೈತ ವಿರೋಧಿ ಮಸೂದೆಗಳನ್ನು ವಾಪಸ್ ಪಡೆಯಬೇಕು. ವಾಪಸ್ ಪಡೆಯುವವರೆಗೆ ಪ್ರತಿಭಟನೆ ಮುಂದುವರೆಸುವದಾಗಿ ಮಾಲತೇಶ್ ಪೂಜಾರ್ ತಿಳಿಸಿದರು.
ಇದೇ ವೇಳೆ ಭತ್ತ ಮತ್ತು ಗೋವಿನಜೋಳ ಬೆಂಬಲ ಬೆಲೆಯಲ್ಲಿ ಖರೀದಿಸಬೇಕು. ಹಾಗೂ ಅಕಾಲಿಕ ಮಳೆಯಿಂದ ಹಾನಿಗೊಳಗಾದ ರೈತರಿಗೆ ಶೀಘ್ರವಾಗಿ ಪರಿಹಾರ ವಿತರಿಸುವಂತೆ ಮಾಲತೇಶ್ ಆಗ್ರಹಿಸಿದರು. ಸರ್ಕಾರ ರೈತರನ್ನ ಕಡೆಗಣಿಸಿದ್ದೆ ಆದರೆ ದೆಹಲಿ ಮಾದರಿಯ ಹೋರಾಟ ರೂಪಿಸುವುದಾಗಿ ಎಚ್ಚಕರಿಕೆ ನೀಡಿದರು.
ಇದೇ ವೇಳೆ ಉತ್ತರಕರ್ನಾಟಕದ ಜಾನಪದ ಕ್ರೀಡೆ ದನಬೆದರಿಸುವ ಸ್ಪರ್ಧೆ ಮೇಲೆ ಜಿಲ್ಲಾಡಳಿತ ಕ್ರಿಮಿನಲ್ ಕೇಸ್ ಹಾಕುವ ಬೆದರಿಕೆ ಹಾಕುತ್ತಿದೆ ಎಂದು ಮಾಲತೇಶ್ ಆರೋಪಿಸಿದರು. ದನ ಬೆದರಿಸುವ ಸ್ಪರ್ಧೆ ಅತಿಹೆಚ್ಚು ಆಯೋಜನೆಯಾಗುವುದು ಹಾವೇರಿ ಜಿಲ್ಲೆಯಲ್ಲಿ. ಅದು ಇಲ್ಲಿಯ ಜಾನಪದ ಕ್ರೀಡೆ. ಇದರಲ್ಲಿ ಕೆಲವೊಂದು ಮಾರ್ಪಾಡು ತಂದ ಆಯೋಜನೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಡಳಿತ ದನ ಬೆದರಿಸುವ ಸ್ಪರ್ಧೆ ಆಯೋಜಿಸುವ ಸಂಘಟನೆಗಳ ಜೊತೆ ಮಾತನಾಡಿ ರೈತರಿಗೆ, ಹೋರಿಗಳಿಗೆ ಮತ್ತು ಪೈಲ್ವಾನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಯಮ ಜಾರಿಗೆ ತರಲಿ. ವೈಜ್ಞಾನಿಕ ಕ್ರಮಗಳ ಮೂಲಕ ಸ್ಪರ್ಧೆ ಆಯೋಜನೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾಡಳಿತ ಈ ಕುರಿತಂತೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವದಾಗಿ ಮಾಲತೇಶ್ ಪೂಜಾರ ಎಚ್ಚರಿಕೆ ರವಾನಿಸಿದರು.