ಹಾವೇರಿ : ಜಿಲ್ಲೆಯ ರೈತರು ಇದೀಗ ಸಂಪ್ರದಾಯ ಬೆಳೆಗಳಿಂದ ತೋಟಗಾರಿಕಾ ಬೆಳೆಗಳತ್ತ ಮುಖಮಾಡಿದ್ದಾರೆ. ಹಿಂದಿನಿಂದಲೂ ಬೆಳೆಯುತ್ತಾ ಬಂದಿದ್ದ ಗೋವಿನಜೋಳ, ಹತ್ತಿ ಮೆಣಸಿನಕಾಯಿ ಬೆಳೆಗಳ ಬದಲಿಗೆ ತೋಟಗಾರಿಕಾ ಬೆಳೆಗಳಾದ ಅಡಕೆ,ಚಿಕ್ಕು, ಪೇರಲ ಮತ್ತು ಡ್ರ್ಯಾಗನ್ ಫ್ರುಟ್ ಕಡೆ ಒಲವು ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯ ಎಂಟು ತಾಲೂಕುಗಳಲ್ಲಿ ರೈತರು ಅಡಕೆ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಹಾನಗಲ್ ತಾಲೂಕು ಒಂದರಲ್ಲೇ ಈ ವರ್ಷ ಸುಮಾರು 2500 ಹೆಕ್ಟೆರ್ ಪ್ರದೇಶದಲ್ಲಿ ಅಡಿಕೆ ಬೆಳೆ ಬೆಳೆಯಲಾಗುತ್ತಿದೆ. ಆದರೆ ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಹಾವೇರಿ ಮತ್ತು ರಾಣೆಬೆನ್ನೂರು ತಾಲೂಕುಗಳಿಗೆ ಮಾತ್ರ ಅಡಿಕೆ ಬೆಳೆಗೆ ಸಬ್ಸಿಡಿ ಸಿಗುತ್ತಿಲ್ಲ. ಉಳಿದ ತಾಲೂಕುಗಳಿಗೆ ಸರ್ಕಾರ ಮತ್ತು ಮಲೆನಾಡು ಅಭಿವೃದ್ಧಿ ಮಂಡಳಿಯಿಂದ ಎಕರೆಗೆ 40 ಸಾವಿರದಿಂದ ಲಕ್ಷದವರೆಗೆ ಸಹಾಯಧನ ನೀಡಲಾಗುತ್ತಿದೆ.
ಅಡಿಕೆ ಬೆಳೆಗಾರರಿಗೆ ಸಹಾಯಧನ ನೀಡಲು ಒತ್ತಾಯ : ಆದರೆ ಹಾವೇರಿ ಮತ್ತು ರಾಣೆಬೆನ್ನೂರು ತಾಲೂಕಿನಲ್ಲಿ ಅಡಿಕೆ ಬೆಳೆಯಲು ಮುಂದಾಗಿರುವ ರೈತರಿಗೆ ಈ ಸಹಾಯಧನ ಸಿಗುತ್ತಿಲ್ಲ. ಇದು ಉಭಯ ತಾಲೂಕುಗಳ ರೈತರನ್ನು ಚಿಂತೆಗೀಡು ಮಾಡಿದೆ. ಈ ಕುರಿತಂತೆ ರೈತರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಅಧಿಕಾರಿಗಳಲ್ಲಿ ಕೇಳಿದರೆ ಹಾವೇರಿ ಮತ್ತು ರಾಣೆಬೆನ್ನೂರು ತಾಲೂಕು ಮಲೆನಾಡು ಪ್ರದೇಶದಲ್ಲಿ ಇಲ್ಲ. ಇದರಿಂದಾಗಿ ಎರಡು ತಾಲೂಕುಗಳಿಗೆ ಅಡಕೆ ಬೆಳೆಗಾರರಿಗೆ ಸಹಾಯಧನ ನೀಡಲಾಗುತ್ತಿಲ್ಲ ಎಂದು ಹೇಳುತ್ತಾರೆ.
ಅಧಿಕಾರಿಗಳು ಈ ರೀತಿ ಹೇಳಿದ್ದರಿಂದಲೇ ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ಸುಮಾರು 250 ಕ್ಕೂ ಅಧಿಕ ಎಕರೆಯಲ್ಲಿ ರೈತರು ಅಡಕೆ ಬೆಳೆದಿದ್ದಾರೆ. ಅಡಿಕೆ ಬೆಳೆ ಹಾಕಿ ಆರು ವರ್ಷಗಳಾಗಿದ್ದು, ಯಾವುದೇ ಹಾನಿಯಾಗಿಲ್ಲ. ಆರು ಎಕರೆಯಲ್ಲಿ ಅಡಿಕೆ ಬೆಳೆದ ರೈತರು ಇದೀಗ 6 ಲಕ್ಷ ರೂಪಾಯಿಗೂ ಅಧಿಕ ಲಾಭಗಳಿಸುತ್ತಿದ್ದಾರೆ. ಹಾವೇರಿ ಮತ್ತು ರಾಣೆಬೆನ್ನೂರು ಈ ಹಿಂದಿನಂತಿಲ್ಲ.
ಈ ಎರಡು ತಾಲೂಕುಗಳಲ್ಲಿ ಸಾಕಷ್ಟು ನೀರಾವರಿ ಅಭಿವೃದ್ಧಿಯಾಗಿದೆ. ಕೆರೆಕಟ್ಟಿಗಳು , ಕೊಳವೆ ಬಾವಿಗಳು ತುಂಬಿದ್ದು, ನೀರಿನ ಸಮಸ್ಯೆ ಇಲ್ಲ.ಈ ಹಿನ್ನೆಲೆಯಲ್ಲಿ ಸರ್ಕಾರ ಇಲ್ಲಿನ ಅಡಿಕೆ ಬೆಳೆಗಾರರಿಗೂ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರದ ಈ ಇಬ್ಬಗೆ ನೀತಿಯಿಂದ ಹಾವೇರಿ ಜಿಲ್ಲೆಯ ಆರು ತಾಲೂಕುಗಳಿಗೆ ಒಂದು ನ್ಯಾಯ ಎರಡು ತಾಲೂಕುಗಳಿಗೆ ಮತ್ತೊಂದು ನ್ಯಾಯ ಎನ್ನುವಂತಾಗಿದೆ. ಸರ್ಕಾರವೇ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುತ್ತಿದೆ. ಮಲತಾಯಿ ಧೋರಣೆ ಮಾಡುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ ಹಾವೇರಿ ಜಿಲ್ಲೆಯವರು ಜೊತೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೂಡ ಹಾವೇರಿ ಜಿಲ್ಲೆ ಪ್ರತಿನಿಧಿಸುತ್ತಿದ್ದಾರೆ. ಆದರೂ ನಮಗೆ ನ್ಯಾಯ ಸಿಗುತ್ತಿಲ್ಲ. ಸರ್ಕಾರ ತಮಗೂ ಸಹ ಸಹಾಯಧನ ನೀಡುವ ಮೂಲಕ ತಾರತಮ್ಯ ಹೋಗಲಾಡಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಓದಿ :ಯಾಕೆ ಈ ಮೀಟಿಂಗ್.. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ ಸರಣಿ ಸಭೆ..!