ಹಾವೇರಿ: "ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ಉತ್ತರ ಕರ್ನಾಟಕ ರೈತರ ಸಂಘ ಸ್ಪರ್ಧಿಸಲಿದೆ" ಎಂದು ಸಂಘದ ರಾಜ್ಯಾಧ್ಯಕ್ಷ ಬಸವರಾಜ ಕರಿಗಾರ್ ತಿಳಿಸಿದ್ದಾರೆ. ಹಾವೇರಿಯಲ್ಲಿ ಸೋಮವಾರ ಈ ಕುರಿತು ಮಾತನಾಡಿದ ಅವರು, "ಯಾವ ಪಕ್ಷದವರೂ ರೈತರ ಪರ ಕೆಲಸ ಮಾಡಲಿಲ್ಲ. ಇದರಿಂದ ನೊಂದು ಚುನಾವಣೆಯಲ್ಲಿ ರೈತರು ಸ್ಪರ್ಧಿಸುತ್ತಿದ್ದಾರೆ" ಎಂದರು.
"ಇದುವರೆಗೆ ರೈತ ಬೆಳೆದ ಬೆಳೆಗಳಿಗೆ ಸರಿಯಾದ ದರ ಸಿಗಲಿಲ್ಲ. ಪ್ರತಿಯೊಂದರಲ್ಲೂ ರೈತರಿಗೆ ಅನ್ಯಾಯವಾಗುತ್ತಿದೆ. ಬೆಳೆ ವಿಮೆ ಇಲ್ಲ. ಪರಿಹಾರವೂ ಇಲ್ಲ. ಅರಣ್ಯ ಜಮೀನನ್ನು ಭೂಸಾಗುವಳಿಗೆ ನೀಡುತ್ತಿಲ್ಲ. ಕೃಷ್ಣಾ ನದಿ ಯೋಜನೆ ಇಲ್ಲಿಯವರೆಗೆ ಮುಕ್ತಾಯವಾಗಿಲ್ಲ" ಎಂದು ಹೇಳಿದರು.
"ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳುವ ಉದ್ದೇಶದಿಂದ ರೈತರನ್ನು ವಿಧಾನಸಭೆಗೆ ಕಳಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಹಣವಿದ್ದರೆ ಚುನಾವಣೆ. ರೈತರ ಹತ್ತಿರ ಹಣ ಎಲ್ಲಿದೆ ಎಂದು ರಾಜಕೀಯ ನಾಯಕರು ಕೇಳುತ್ತಾರೆ. ಇದಕ್ಕೆ ಸಂಘ ಉಪಾಯ ಮಾಡಿದೆ. ಚುನಾವಣೆ ಸಮಯದಲ್ಲಿ ಅಭ್ಯರ್ಥಿಗಳು ಮೂರು ಜೋಳಿಗೆಗಳನ್ನು ಹಿಡಿದು ಮತದಾರರ ಮನೆಗೆ ಹೋಗುತ್ತಾರೆ. ಒಂದು ಜೋಳಿಗೆಯಲ್ಲಿ ಮತ ಪ್ರಮಾಣದ ಪತ್ರ, ಮತ್ತೊಂದು ಜೋಳಿಗೆಯಲ್ಲಿ ಚುನಾವಣೆಗೆ ಹಣ ಮತ್ತು ಮೂರನೇಯ ಜೋಳಿಗೆಯಲ್ಲಿ ರೊಟ್ಟಿ ಭಿಕ್ಷೆ ಬೇಡುತ್ತೇವೆ" ಎಂದು ಬಸವರಾಜ್ ತಿಳಿಸಿದರು.
"ಈ ರೀತಿ ಮತದಾರನಿಂದ ಹಣ ಮತ್ತು ರೊಟ್ಟಿ ಸಂಗ್ರಹಿಸುತ್ತೇವೆ. ಮತದಾರ ನೀಡಿದ ಹಣ ಮತ್ತು ರೊಟ್ಟಿಗಳನ್ನು ಅದೇ ಊರಿನ ದೇವಸ್ಥಾನಗಳಲ್ಲಿ ಎಣಿಸುತ್ತೇವೆ. ರೊಟ್ಟಿಗಳನ್ನು ಎಣಿಸಿ ಸಾಂಬಾರ ಮಾಡಿಕೊಂಡು ತಿನ್ನುತ್ತೇವೆ. ಮತದಾರರು ನೀಡಿದ ಹಣದಿಂದ ವಾಹನಗಳಿಗೆ ಡೀಸೆಲ್ ಹಾಕಿಕೊಂಡು ಮುಂದಿನ ಗ್ರಾಮಗಳಿಗೆ ಮತ ಪ್ರಚಾರಕ್ಕೆ ಹೋಗುತ್ತೇವೆ. ಪ್ರತಿಯೊಂದು ಗ್ರಾಮದಲ್ಲಿ ನೂರು ರೈತರನ್ನು ಸದಸ್ಯರನ್ನಾಗಿ ಮಾಡುತ್ತೇವೆ. ಎಲ್ಲ ಜಿಲ್ಲೆಗಳಲ್ಲಿ ಉತ್ತರ ಕರ್ನಾಟಕ ರೈತ ಸಂಘದ ಸಂಘಟನೆ ಪ್ರಬಲವಾಗಿದೆ. ಫೆಬ್ರವರಿ 20 ತಾರೀಖಿನೊಳಗಾಗಿ 80 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ" ಎಂದು ಮಾಹಿತಿ ನೀಡಿದರು.
"ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ನಂತರ ಬಿಡುಗಡೆ ಮಾಡುತ್ತೇವೆ. ರೈತ ಸಂಘ ವಿಧಾನಸಭೆಯೊಳಗೆ ರೈತರನ್ನು ಕಳುಹಿಸಲು ಈಗಾಗಲೇ ಸಿದ್ದತೆ ಕೈಗೊಂಡಿದೆ. ನಮ್ಮಲ್ಲಿ ಶೇ 80 ರಷ್ಟು ರೈತರಿದ್ದಾರೆ. ಶೇ.14 ರಷ್ಟು ಕೈಗಾರಿಕೋದ್ಯಮಿಗಳಿದ್ದಾರೆ. ಅವರು ಸಹ ರೈತರನ್ನು ಅವಲಂಬಿಸಿದ್ದಾರೆ. ಕಾರ್ಮಿಕರಿಂದ ಉಪಕರಣಗಳನ್ನು ತಯಾರಿಸುತ್ತಾರೆ. 80 ಪ್ರತಿಶತ ರೈತರಿದ್ದು ನಾವು ಯಾರೊಬ್ಬರೂ ಶಾಸಕರಾಗದೇ ಇರುವುದು ನಮ್ಮ ದುರ್ದೈವ" ಎಂದರು.
"ರೈತರೆಲ್ಲ ಒಂದಾದರೆ ಈ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಏನೂ ಅಲ್ಲ. ಇಲ್ಲಿಯವರೆಗೆ ರೈತ ಸಂಘದಿಂದ ಚುನಾವಣೆ ಮಾಡಲಿಲ್ಲ. ಏಕೆಂದರೆ ನಮಗೆ ಏದಕ್ಕ ಬೇಕಪ್ಪಾ ಎನ್ನುವ ವಿಚಾರದಲ್ಲಿ ರೈತರಿದ್ದರು. ಇವತ್ತು ನಮಗ ತ್ರಾಸ್ ಆಗೈತಿ ಅಂತಾ ರೈತರನ್ನು ವಿಧಾನಸೌಧದೊಳಗೆ ಕಳುಹಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಸಂಘದ ತಾಲೂಕಾಧ್ಯಕ್ಷ, ಜಿಲ್ಲಾಧ್ಯಕ್ಷರ ಕಾರ್ಯವೈಖರಿ ನೋಡಿಕೊಂಡು ಅವರನ್ನು ಅಭ್ಯರ್ಥಿಯನ್ನಾಗಿ ಮಾಡುತ್ತೇವೆ. ಪ್ರತಿಗ್ರಾಮದಲ್ಲಿ ಗ್ರಾಮ ಘಟಕ ಉದ್ಘಾಟಿಸುತ್ತೇವೆ. ಪ್ರತಿಸಂಘದಲ್ಲಿ ಗ್ರಾಮದ ನೂರು ಜನರನ್ನು ಸದಸ್ಯರನ್ನಾಗಿ ಮಾಡುತ್ತೇವೆ" ಎಂದು ವಿವರಿಸಿದರು.
ಇದನ್ನೂ ಓದಿ: ನಷ್ಟದ ಹಾದಿಯಲ್ಲಿ ವಿಐಎಸ್ಎಲ್.. ಕಾರ್ಖಾನೆ ಮುಚ್ಚದಂತೆ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ