ಹಾವೇರಿ: ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ ರೈತನ ಶವವಿಟ್ಟು ಪ್ರತಿಭಟನೆ ನಡೆಸಲು ಮುಂದಾದ ರೈತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಾಗೇನಹಳ್ಳಿ ಗ್ರಾಮದ ಯುವ ರೈತ ದರ್ಶನ ಮುದ್ದಪ್ಪನವರ್ (30) ಮೃತನಾಗಿದ್ದು, ಮೂರು ಎಕರೆ ಹತ್ತು ಗುಂಟೆ ಜಮೀನು ಹೊಂದಿದ್ದ. ಮಾಕನೂರು ಗ್ರಾಮದ ಯೂನಿಯನ್ ಬ್ಯಾಂಕ್ ಸೇರಿದಂತೆ ವಿವಿಧೆಡೆ ಬ್ಯಾಂಕ್ ಮತ್ತು ಕೈಸಾಲ ಸೇರಿ ಆರು ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ. ಆದರೆ, ಒನ್ ಟೈಂ ಸೆಟ್ಲಮೆಂಟ್ ಯೋಜನೆಯ ಲಾಭ ಸಿಗದಂತೆ ಬ್ಯಾಂಕ್ ಸಿಬ್ಬಂದಿ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಇದರಿಂದ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಮೃತದೇಹ ಮಾಕನೂರು ಗ್ರಾಮದ ಬ್ಯಾಂಕ್ನ ಮುಂದಿಟ್ಟು ಪ್ರತಿಭಟನೆ ಮಾಡಲು ರೈತರು ಸಿದ್ಧತೆ ನಡೆಸಿದ್ದರು. ಬೆಳಗ್ಗೆ ಮೃತದೇಹ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲು ಪೊಲೀಸರು ಸತಾಯಿಸಿದ್ದರು ಎನ್ನಲಾಗಿದೆ.
ಅಲ್ಲದೇ, ರೈತರ ದಾರಿ ತಪ್ಪಿಸಿ ಬೇರೆ ಮಾರ್ಗದ ಮೂಲಕ ಪೊಲೀಸರು ಮೃತದೇಹವನ್ನು ನೇರವಾಗಿ ಮನೆಗೆ ತಂದಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಮೃತನ ಕುಟುಂಬಸ್ಥರು ಸೇರಿ ಇಪ್ಪತ್ತೈದಕ್ಕೂ ಅಧಿಕ ರೈತರನ್ನು ಪೊಲೀಸರು ವಶಕ್ಕೆ ಪಡೆದರು.
ಇದನ್ನೂ ಓದಿ: ಕೈಗಾರಿಕಾ ಕಾರಿಡಾರ್ಗಾಗಿ ಕೃಷಿ ಭೂಮಿ ಮೇಲೆ ಅಧಿಕಾರಿಗಳ ಕಣ್ಣು: ರೈತರಿಗೆ ಹೇಳದೇ - ಕೇಳದೆ ಬಂತು ನೋಟಿಸ್