ಹಾವೇರಿ: ಗಣೇಶನ ಹಬ್ಬ ಹಲವು ಕಲಾವಿದರಿಗೆ ವೇದಿಕೆ ಒದಗಿಸುತ್ತದೆ. ತಮ್ಮ ಕೈಚಳಕದಲ್ಲಿ ಮೂಡಿಬಂದ ಗಣಪನ ಮೂರ್ತಿಗಳ ಮೂಲಕ ಕಲಾವಿದರು ಹಲವು ವಿಚಾರ, ಸಂಪ್ರದಾಯಗಳನ್ನು ಬಿಂಬಿಸುತ್ತಾರೆ. ಅಂತಹದ್ದೇ ಒಂದು ಕಲೆಯನ್ನು ಪ್ರದರ್ಶಿಸುವ ಮೂಲಕ ಜಿಲ್ಲೆಯ ರೈತನೋರ್ವ ಗಮನ ಸೆಳೆದಿದ್ದಾರೆ.
ಸವಣೂರು ತಾಲೂಕಿನ ನದಿನೀರಲಗಿಯ ಯಲ್ಲೋಜಿರಾವ್ ಪವಾರ ಎಂಬ ರೈತ ತಮ್ಮ ಮನೆಯಲ್ಲಿ ಸ್ಥಾಪಿಸಿರುವ ಗಣೇಶನ ಮುಂದೆ ರೈತಾಪಿ ಜೀವನವನ್ನು ಸಾರುವ ಸಣ್ಣ ಸಣ್ಣ ಗೊಂಬೆಗಳನ್ನು ಮಾಡಿದ್ದು, ನೆನೆಯೋಣ ಬನ್ನಿ, ಇವು ರೈತನ ಆಭರಣಗಳು ಎಂಬ ಶಿರ್ಷಿಕೆಯಡಿ ಈ ಗೊಂಬೆಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ರೈತನ ಒಡನಾಡಿಯಾದ ಎತ್ತುಗಳು, ರಂಟಿ, ಕುಂಟೆ, ನೇಗಿಲು, ಕುರಿಗೆ, ಬಾರಕೋಲು, ಹಗ್ಗ, ಬೀಸಣಿಕೆ ಮತ್ತು ರೂಲರ್ಗಳನ್ನು ಮಣ್ಣು ಹಾಗೂ ಕಟ್ಟಿಗೆಯಲ್ಲಿ ನಿರ್ಮಿಸಿದ್ದು, ನೋಡುಗರು ಹುಬ್ಬೇರಿಸುವಂತೆ ಮಾಡಿದ್ದಾರೆ.
ರೈತ ಖಾಲಿ ಜಮೀನಿನಲ್ಲಿ ರಂಟಿ ಹೊಡೆಯುವುದು(ಊಳುವುದು), ಗೊಬ್ಬರ ಹಾಕುವುದು, ಕಳೆ ತೆಗೆಯುವುದು, ಚಕ್ಕಡಿಗಳಲ್ಲಿ ಹೋಗುವುದು ಸೇರಿದಂತೆ ಅನೇಕ ಬಗೆಯ ದೃಶ್ಯಗಳನ್ನು ಇಲ್ಲಿ ಕಾಣಬಹುದು. ಇವರ ಈ ಕಲೆ ಸುತ್ತಮುತ್ತಲಿನ ಗ್ರಾಮಸ್ಥರ ಆಕರ್ಷಣಿಗೆ ಪಾತ್ರವಾಗಿದೆ.