ರಾಣೆಬೆನ್ನೂರು: ಅಕ್ಟೋಬರ್ 28 ರಂದು ನಡೆದ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ನಕಲಿ ಮತದಾನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ತಾಲೂಕಿನ ಕುಮಾರಪಟ್ಟಣಂ ಪೊಲೀಸ್ ಠಾಣೆಯಲ್ಲಿ 74/2020 ಕಲಂ 419, 174(ಎಫ್) ಐ.ಪಿ.ಸಿ ಪ್ರಕರಣ ದಾಖಲಾಗಿದೆ.
ಕೊಡಿಯಾಲ ಹೊಸಪೇಟೆ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 105 ರಲ್ಲಿ ಯಾರೋ ಇಬ್ಬರು ಅನಾಮಧೇಯ ವ್ಯಕ್ತಿಗಳು ಅ. 28 ರಂದು ಬೆಳಗ್ಗೆ 8 ಗಂಟೆಯಿಂದ ಸಾಯಂಕಾಲ 5 ಗಂಟೆಯ ನಡುವಿನ ಅವಧಿಯಲ್ಲಿ ಮತದಾರ ಪಟ್ಟಿಯಲ್ಲಿ ನೊಂದಾಯಿತರಾದ (ಮತದಾರ) ಶೀಲಾ. ಕೆ.ಎಸ್ ಹಾಗೂ ವೀರಪ್ಪ ಹಾಲಪ್ಪ ನಂದಿಗಾವಿ ಇವರ ಹೆಸರಿನ ಮೇಲೆ ಯಾರೋ ಇಬ್ಬರು ವ್ಯಕ್ತಿಗಳು ಮತದಾರರಂತೆ ನಟಿಸಿ ಬಂದು ಮತ ಚಲಾಯಿಸಿದ್ದಾರೆ. ನಕಲಿ ಮತದಾನ ಮಾಡಿದವರು ಯಾರೆಂದು ಪತ್ತೆ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ತಹಶೀಲ್ದಾರ್ ಹಾಗೂ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾಗಿರುವ ಬಸನಗೌಡ ಈರನಗೌಡ ಕೊಟೂರು ಕುಮಾರಪಟ್ಟಣಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.