ಹಾವೇರಿ: ಪ್ರಧಾನಿ ನರೇಂದ್ರ ಮೋದಿಗೆ ಟೀಕೆ ಮಾಡದಿದ್ದರೇ ಮಾಜಿ ಸಿ.ಎಂ.ಸಿದ್ದರಾಮಯ್ಯಗೆ ಉಂಡ ಅನ್ನ ಅರಗುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್ ನೀಡಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ, ಮೋದಿ ವಿರುದ್ಧ ಟೀಕೆ ಮಾಡುವ ಮೂಲಕ ನಾನೇ ದೊಡ್ಡ ನಾಯಕ ಅನ್ನುವ ಭ್ರಮೆಯಲ್ಲಿದ್ದಾರೆ ಎಂದು ಲೇವಡಿ ಮಾಡಿದರು. ಇದೇ ವೇಳೆ, ಸಿದ್ದರಾಮಯ್ಯ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತಂತೆ ಟೀಕೆ ಮಾಡುತ್ತಿದ್ದಾರೆ. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನ ಮುಸ್ಲಿಮರೇ ಸ್ವಾಗತ ಮಾಡಿದ್ದಾರೆ ಎಂದರು.
ಸಿದ್ದರಾಮಯ್ಯಗೆ ಎಷ್ಟು ಬಾರಿ ಸೋತರು ಬುದ್ದಿ ಬರಲಿಲ್ಲ, ಅವರಿಗೆ ಇನ್ನು ಎಷ್ಟು ಚುನಾವಣೆ ಸೋತ ಮೇಲೆ ಬುದ್ದಿ ಬರುತ್ತೋ ಅವರೇ ಹೇಳಬೇಕು ಎಂದು ಸವಾಲೆಸಿದರು. ಚಾಮುಂಡೇಶ್ವರಿಯಲ್ಲಿ ಸೋತರು, ಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಒಂದು ಸೀಟು ಬರಲ್ಲ ಅಂದಿದ್ರು, ಉಪಚುನಾವಣೆಯಲ್ಲಿ ಸಹ ಬಿಜೆಪಿಗೆ ಹೆಚ್ಚಿನ ಸೀಟು ಬಂದಾಗ ಅವರಿಗೆ ಬುದ್ದಿ ಬರಲಿಲ್ಲ ಎಂದು ಛೇಡಿಸಿದರು.
ಶಾಸಕರಾದ ಮೇಲೆ ಎಲ್ಲರಿಗೂ ಸಚಿವರಾಗಬೇಕು ಎನ್ನುವ ಆಸೆ ಇರುತ್ತೆ. ಎಲ್ಲ ಸ್ವಾಮೀಜಿಗಳಿಗೂ ತಮ್ಮ ಜಾತಿಯವರು ಸಚಿವ, ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇರುತ್ತೆ. ಆದರೆ, ಸಂವಿಧಾನದಲ್ಲಿ ಏನು ಇರುತ್ತೊ ಅದನ್ನ ಪಾಲಿಸಬೇಕಾಗುತ್ತೆ. ಅದರಂತೆ ಸಚಿವ ಸ್ಥಾನ, ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಾಗುತ್ತೆ. ಸ್ವಾಮೀಜಿಗಳು ತಮಗೆ ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.