ರಾಣೆಬೆನ್ನೂರು: ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ. ಬಸವರಾಜ ಕೇಲಗಾರ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವುದಾಗಿ ಮಾತು ಕೊಟ್ಟಿದ್ದಾರೆ. ಇದರಿಂದ ರಾಣೆಬೆನ್ನೂರು ಕ್ಷೇತ್ರದ ಅಸಮಾಧಾನದ ಹೊಗೆ ಶಮನಗೊಂಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪಕ್ಷ ಯಾವುದೇ ರೀತಿಯಲ್ಲಿ ಬಲಿಷ್ಠವಿಲ್ಲದ ಸಮಯದಲ್ಲಿ ಕೇಲಗಾರ ಪಕ್ಷವನ್ನು ಕಟ್ಟಿ ಬೆಳಸಿದ್ದಾರೆ. ಈ ಉಪ ಚುನಾವಣೆಯಲ್ಲಿ ಟಿಕೆಟ್ ಸಿಗುತ್ತದೆ ಎಂಬ ಅಪೇಕ್ಷೆಯಲ್ಲಿದ್ದರು. ಆದರೆ, ಹೈಕಮಾಂಡ್ ಟಿಕೆಟ್ ಬೇರೊಬ್ಬರಿಗೆ ನೀಡಿದೆ. ಇದರಿಂದ ಸಹಜವಾಗಿಯೆ ಬೇಸರವಾಗಿದ್ದಾರೆ ಎಂದರು.
ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಪರ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು. ಡಾ. ಕೇಲಗಾರ ಅವರು ವೃತ್ತಿಯಲ್ಲಿ ವೈದ್ಯರು. ಅವರು ಪಕ್ಷದಿಂದ ಯಾವುದೇ ಬೇಡಿಕೆ ಇಟ್ಟಿಲ್ಲ. ಅವರ ಇಡೀ ಕುಟುಂಬವೇ ಬಿಜೆಪಿ ಪಕ್ಷಕ್ಕಾಗಿ ದುಡಿದಿದೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ಪಕ್ಷವು ನನಗೆ ತಾಯಿ ಇದ್ದಂತೆ. ನಾನು ಎಂದಿಗೂ ದ್ರೋಹ ಮಾಡಿಲ್ಲ, ಮಾಡುವುದಿಲ್ಲ. ನನ್ನ ವಿರುದ್ಧ ಕೆಲಸ ಮಾಡಿದವರಿಗೂ ಸಹ ನಗರಸಭೆ ಚುನಾವಣೆಯಲ್ಲಿ ಮತ ನೀಡುವಂತೆ ಬೇಡಿಕೊಂಡಿದ್ದೇನೆ. ಈಗ ಟಿಕೆಟ್ ಕೈತಪ್ಪಿದ್ದರಿಂದ ಬೇಸರವಾಗಿದ್ದು ನಿಜ ಎಂದು ಬಿಜೆಪಿ ಮುಖಂಡ ಡಾ. ಬಸವರಾಜ ಕೇಲಗಾರ ಹೇಳಿದರು.