ಹಾವೇರಿ: ಜಿಲ್ಲಾಸ್ಪತ್ರೆಗೆ ಹೊಂದಿಕೊಂಡಂತಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವಿದ್ಯುತ್ ಪ್ಯಾನಲ್ ಬೋರ್ಡ್ ಕೆಟ್ಟು ಎರಡು ತಿಂಗಳು ಕಳೆದಿತ್ತು. ಇದರಿಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಸಮಸ್ಯೆಯಾಗುತ್ತಿತ್ತು.
ಈ ಕುರಿತಂತೆ ಈಟಿವಿ ಭಾರತ ಇದೇ ಡಿಸೆಂಬರ್ 4ರಂದು ಸುದ್ದಿ ಪ್ರಕಟಿಸಿದೆ. ಅಲ್ಲದೆ, ಈ ಕುರಿತಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣನವರ್‌ಗೆ, ಸಿಎಂ ತವರು ಜಿಲ್ಲೆಯಲ್ಲೇ ಈ ರೀತಿಯಾದರೆ ಹೇಗೆ ಎಂದು ಪ್ರಶ್ನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಜಿಲ್ಲಾಡಳಿತ ಈಗ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವಿದ್ಯುತ್ ಸಮಸ್ಯೆ ನಿವಾರಿಸಲು ಮುಂದಾಗಿದೆ.
ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಹಾಳಾಗಿರುವ ಪ್ಯಾನಲ್ ಬೋರ್ಡ್ ಅನ್ನು ಬೆಂಗಳೂರಿನಿಂದ ತರಿಸಲಾಗುತ್ತಿದ್ದು, ಆದಷ್ಟು ಬೇಗ ವಿದ್ಯುತ್ ಸರಬರಾಜು ಸಮಸ್ಯೆಗಳ ನಿವಾರಣೆಗೆ ಮುಂದಾಗಿದೆ. ಜಿಲ್ಲಾಧಿಕಾರಿ ಮತ್ತು ಹಾವೇರಿ ಶಾಸಕ ನೆಹರು ಓಲೇಕಾರ್ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಗಮನಿಸಿ ತಾವೇ ವಿದ್ಯುತ್ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಬುಧವಾರ ನೆಹರು ಓಲೇಕಾರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯುತ್ ವೈರಿಂಗ್ ಸೇರಿದಂತೆ ನೂತನ ಕನೆಕ್ಷನ್ ಕುರಿತಂತೆ ಮಾಹಿತಿ ಪಡೆದರು. ಆಪರೇಷನ್ ಥೇಟರ್ ಸೇರಿದಂತೆ ಪ್ರಮುಖ ಕೊಠಡಿಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ಜಿಲ್ಲಾಧಿಕಾರಿ ಮತ್ತು ತಾವು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವಿದ್ಯುತ್ ಸಮಸ್ಯೆ ನಿವಾರಣೆಗೆ ಮುಂದಾಗಿರುವುದಾಗಿ ತಿಳಿಸಿದರು.
ಇದನ್ನೂ ಓದಿ: ಹವಾಮಾನ ವೈಪರೀತ್ಯ: ಹುಬ್ಬಳ್ಳಿಯಲ್ಲಿ ತಡವಾಗಿ ಲ್ಯಾಂಡ್ ಆದ ಸಿಎಂ ಪ್ರಯಾಣಿಸುತ್ತಿದ್ದ ವಿಮಾನ