ಹಾವೇರಿ: ಹಾವೇರಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ.
34 ಸದಸ್ಯ ಬಲದ ಜಿಲ್ಲಾ ಪಂಚಾಯ್ತಿಯಲ್ಲಿ 22 ಸದಸ್ಯ ಬಲ ಹೊಂದಿರೋ ಕಾಂಗ್ರೆಸ್ಗೆ ಬಹುಮತವಿದೆ. ಆದರೆ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಈ ಪರಿಸ್ಥಿತಿಯ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ. ಕಾಂಗ್ರೆಸ್ ಸದಸ್ಯರಲ್ಲಿ ಬಂಡಾಯ ಕಂಡರೆ ಪರೋಕ್ಷ ಬೆಂಬಲ ನೀಡಿ ಅಧಿಕಾರದ ಗದ್ದುಗೆಗೇರಲು ಬಿಜೆಪಿ ಪ್ಲಾನ್ ರೂಪಿಸಿದೆ.
ಬಸನಗೌಡ ದೇಸಾಯಿ, ಮಾಜಿ ಸಚಿವ ಮನೋಹರ ತಹಶೀಲ್ದಾರ ಪುತ್ರ ರಾಘವೇಂದ್ರ ತಹಶೀಲ್ದಾರ, ಏಕನಾಥ ಬಾನುವಳ್ಳಿ ಸೇರಿದಂತೆ ಅಧ್ಯಕ್ಷ ಸ್ಥಾನದ ರೇಸ್ನಲ್ಲಿ ನಾಲ್ಕೈದು ಜನ ಆಕಾಂಕ್ಷಿಗಳಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರಿಗೂ ಅಧ್ಯಕ್ಷರ ಆಯ್ಕೆ ತಲೆನೋವಾಗಿದೆ. ಎಸ್.ಕೆ.ಕರಿಯಣ್ಣನವರ ರಾಜೀನಾಮೆಯಿಂದಾಗಿ ಅಧ್ಯಕ್ಷ ಸ್ಥಾನ ತೆರವಾಗಿದ್ದು, ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.
ಇಂದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಬರಲಿದ್ದು, ಹಾವೇರಿ ಜಿಲ್ಲಾ ಪಂಚಾಯತ್ ಕೈ ಪಾಲಾಗಲಿದೆಯಾ ಅಥವಾ ಕಮಲದ ಮುಡಿಗೇರಲಿದೆಯಾ ಎಂಬುದನ್ನ ಕಾದು ನೋಡಬೇಕಿದೆ.