ಹಾವೇರಿ : ಡಿಪೋ ಮ್ಯಾನೇಜರ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಡ್ರೈವರ್ ಕಂ ಕಂಡಕ್ಟರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಹಾವೇರಿ ಜಿಲ್ಲೆಯ ಬ್ಯಾಡಗಿ ವಾಯವ್ಯ ಸಾರಿಗೆ ಸಂಸ್ಥೆಯ ಡಿಪೋದಲ್ಲಿ ಈ ಘಟನೆ ನಡೆದಿದೆ.
ಮನೋಜ್‌ಕುಮಾರ್ (44) ಆತ್ಮಹತ್ಯೆಗೆ ಯತ್ನಿಸಿದ ಡ್ರೈವರ್ ಕಂ ಕಂಡಕ್ಟರ್. ಅಸ್ವಸ್ಥಗೊಂಡ ಅವರಿಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡಿಪೋಗೆ ಬಂದಿದ್ದರೂ ಕರ್ತವ್ಯಕ್ಕೆ ತೆರಳದೆ ಕಾಲ ಹರಣ ಮಾಡಿದ್ದೀರಿ ಎಂಬ ಕಾರಣ ನೀಡಿ ಡಿಪೋ ಮ್ಯಾನೇಜರ್ ಮನೋಜ ಕುಮಾರ್ ಅವರನ್ನು ಕಳೆದ ಐದು ದಿನಗಳ ಹಿಂದೆ ಅಮಾನತು ಮಾಡಿದ್ದರು.
ಇಂದು ಮನೋಜ್‌ಕುಮಾರ್ ಡಿಪೋಗೆ ತೆರಳಿ ಡಿಪೋ ಮ್ಯಾನೇಜರ್ಗೆ ಸರ್ ಹೀಗ್ಯಾಕೆ ಮಾಡಿದ್ದೀರಿ?, ನಮ್ಮ ಹೆಂಡತಿ ಮಕ್ಕಳ ಗತಿ ಏನು ಎಂದು ಪಶ್ನಿಸಲು ತೆರಳಿದ ವೇಳೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗ್ತಿದೆ.
ಡಿಪೋ ಮ್ಯಾನೇಜರ್ ಕಿರುಕುಳದ ವಿರುದ್ಧ ಸಾರಿಗೆ ಇಲಾಖೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.