ರಾಣೆಬೆನ್ನೂರು(ಹಾವೇರಿ): ರಾಜ್ಯ ಹೆದ್ದಾರಿ ನಿರ್ಮಾಣದ ಹಿನ್ನೆಲೆ ರಸ್ತೆ ಬದಿಗಳಲ್ಲಿ ಬೆಳೆದು ನಿಂತಿದ್ದ ಶತಮಾನದ ನೂರಾರು ಹುಣಸೆ ಮತ್ತು ಬೇವಿನ ಮರಗಳಿಗೆ ಕೊಡಲಿ ಏಟು ನೀಡಲಾಗಿದೆ.
ರಾಣೆಬೆನ್ನೂರು ಮಾರ್ಗವಾಗಿ ತೆರಳುವ ಸಮ್ಮಸಗಿ-ಬಿಳಗಿರಿರಂಗನಬೆಟ್ಟ ರಾಜ್ಯ ಹೆದ್ದಾರಿ ಅಗಲೀಕರಣದ ಸಲುವಾಗಿ ಇಲ್ಲಿನ ದೇರವರಗುಡ್ಡ ಮಾರ್ಗದ ಬದಿಯಲ್ಲಿದ್ದ ನೂರಾರು ಗಿಡಗಳನ್ನು ಕಡಿಯಲಾಗುತ್ತಿದೆ.
ರಾಣೆಬೆನ್ನೂರು ಮಾರ್ಗವಾಗಿ ದೇವರಗುಡ್ಡ, ಹೊನ್ನತ್ತಿ, ಗುತ್ತಲ ಹಾಗೂ ಮೈಲಾರ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಗಿಡಗಳನ್ನು ನೆಡಲಾಗಿತ್ತು. ಇವುಗಳಿಂದ ದೇವಸ್ಥಾನಕ್ಕೆ ಹೋಗುವ ಭಕ್ತರು ಮರಗಳ ಕೆಳಗೆ ವಿಶ್ರಾಂತಿಗೆ ನಿಲ್ಲುತ್ತಿದ್ದರು. ಆದರೆ ಈಗ ರಸ್ತೆ ನಿರ್ಮಾಣದ ನೆಪದಲ್ಲಿ ನೂರಾರು ಗಿಡಗಳನ್ನು ಕಡಿಯುವ ಮೂಲಕ ಪರಿಸರವನ್ನು ಹಾಳು ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಸದ್ಯ ಹಲವು ಮರಗಳನ್ನು ಕಡಿದು ಸಾಗಿಸಲಾಗಿದ್ದು, ಉಳಿದ ಮರಗಳನ್ನು ಸ್ಥಳಾಂತರ ಅಥವಾ ಮರಗಳನ್ನು ಮಧ್ಯ ಭಾಗದಲ್ಲಿ ಬರುವ ರೀತಿಯಾಗಿ ಮಾಡಬೇಕು ಎಂದು ಕೆಲ ಪರಿಸರ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡುತ್ತಿದ್ದಾರೆ. ಆದರೆ ಈಗಾಗಲೇ ಮರಗಳನ್ನು ಗುತ್ತಿಗೆ ತೆಗೆದುಕೊಂಡು ಸರ್ಕಾರಕ್ಕೆ ಹಣ ನೀಡಿ ತೆರವು ಮಾಡಲಾಗುತ್ತಿದೆ ಎಂದು ರಸ್ತೆ ಉಸ್ತುವಾರಿ ಎಂಜಿನಿಯರ್ ತಿಳಿಸಿದ್ದಾರೆ.