ಹಾವೇರಿ: ಕೆಲ ತಿಂಗಳ ಹಿಂದೆ ಸಂದೇಶ ಸೇಟ್(21) ಯುವಕ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಸಂದೇಶನ ಅಕಾಲಿಕ ಸಾವು ತಂದೆ - ತಾಯಿಗೆ ಆಘಾತ ಉಂಟು ಮಾಡಿತ್ತು. ಸಂದೇಶ ಜೀವಂತವಾಗಿದ್ದರೆ ಇಂದಿಗೆ 22ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಆದರೆ ಜನ್ಮದಿನ ಆಚರಿಸಿಕೊಳ್ಳಬೇಕಾಗಿದ್ದ ಮಗ ಈಗ ನೆನಪು ಮಾತ್ರ. ಹಾಗಾಗಿ ಕುಟುಂಬಸ್ಥರು ಸಂದೇಶನ ಹೆಸರನ್ನು ಚಿರಸ್ಥಾಯಿಯಾಗಿಸಲು ಮುಂದಾಗಿದ್ದಾರೆ.
ಹೌದು, ಕುಟುಂಬ ಇದೀಗ ಸಂದೇಶ ಹೆಸರಿನಲ್ಲಿ ಹಾವೇರಿ ಸಮೀಪದ ಗಾಂಧಿಪುರ ಗ್ರಾಮದಲ್ಲಿ ಗೋಶಾಲೆಯೊಂದನ್ನು ತೆರೆದಿದೆ. ಸಂದೇಶ ಜನ್ಮದಿನವಾದ ಇಂದು (ನ.20) ಸಂದೇಶ ಗೋಶಾಲೆಯ ಉದ್ಘಾಟನೆ ಕಾರ್ಯಕ್ರಮ ಜರುಗಿತು. ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀಗಳು ಸಂದೇಶ ಗೋಶಾಲೆಯ ದ್ವಜಾರೋಹಣ ನೆರವೇರಿಸಿದರು. ನಂತರ ಗೋಶಾಲೆ ಉದ್ಘಾಟಿಸಿದ ಶ್ರೀಗಳು, ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು. ನಂತರ ಶ್ರೀಗಳು ಗೋಶಾಲೆಯಲ್ಲಿದ್ದ ಜಾನುವಾರುಗಳಿಗೆ ಮೇವು ತಿನ್ನಿಸಿದರು. ಸಂದೇಶ ಅವರ ತಂದೆ - ತಾಯಿ, ಸಂಬಂಧಿಕರು ಗೋಶಾಲೆಯಲ್ಲಿನ ಜಾನುವಾರುಗಳಿಗೆ ಮೇವು ಹಾಕಿ, ಮಗನನ್ನು ಸ್ಮರಿಸಿದರು.
ಮಾದರಿ ಕಾರ್ಯ: ಈ ಕುರಿತು ಸದಾಶಿವಶ್ರೀಗಳು ಮಾತನಾಡಿ, ಸಂದೇಶನ ಸಾವು ತಂದೆ - ತಾಯಿಗೆ ತೀವ್ರ ನೋವು ತಂದಿದೆ. ತಮ್ಮ ಮಗನ ಹೆಸರನ್ನು ಚಿರಸ್ಥಾಯಿಯಾಗಿಸಲು ದಂಪತಿ ಈ ಗೋಶಾಲೆ ತೆರೆದಿರುವುದು ಮಾದರಿಯಾಗಿದೆ. ಈ ಗೋಶಾಲೆಯನ್ನು ಜಿಲ್ಲೆಯ ರೈತರು, ಜನರು ಸದುಪಯೋಗಪಡಿಸಿಕೊಳ್ಳಬೇಕು. ದಂಪತಿ ಆರಂಭಿಸಿರುವ ಗೋಶಾಲೆ ಸದುಪಯೋಗಪಡಿಸಿಕೊಳ್ಳುವ ಮೂಲಕ ಇವರ ಕಾರ್ಯಕ್ಕೆ ಸಾರ್ಥಕತೆ ತರಬೇಕು ಎಂದು ಮನವಿ ಮಾಡಿದರು.
ಸಂದೇಶರ ತಾಯಿ ಸಂಗೀತ ಮಾತನಾಡಿ, ಎದೆಯೆತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಳ್ಳುವುದು ಹೆತ್ತ ಕರುಳಿಗೆ ದೊಡ್ಡ ಸಂಕಟ. ಇಂತಹ ಸ್ಥಿತಿ ಯಾವ ತಾಯಿಗೂ ಬರುವುದು ಬೇಡ. ಸಂದೇಶನನ್ನು ತೊಟ್ಟಿಲಲ್ಲಿ ಆಡಿಸಿ ಬೆಳೆಸಿದ ನನಗೆ ಈ ಗೋಶಾಲೆಯೇ ಒಂದು ತೊಟ್ಟಿಲು ಇದ್ದಂತೆ. ಅದರಲ್ಲಿರುವ ಗೋವುಗಳನ್ನು ನನ್ನ ಸ್ವಂತ ಮಕ್ಕಳಂತೆ ನೋಡಿಕೊಳ್ಳುವ ಮೂಲಕ ಅವುಗಳಲ್ಲೇ ನನ್ನ ಮಗನನ್ನು ಕಾಣುತ್ತೇನೆ. ಸಂದೇಶ ಇದ್ದಿದ್ದರೆ ಇಂದು ಅವನ 22ನೇ ಜನ್ಮದಿನ ಆಚರಿಸುತ್ತಿದ್ದೆವು. ಆದರೆ, ವಿಧಿಯಾಟ ಅವನು ನಮ್ಮಿಂದ ಅಗಲಿದ್ದಾನೆ. ಈ ಗೋಶಾಲೆಯ ಜಾನುವಾರುಗಳ ಮೂಲಕ ಅವನು ಜೀವಂತವಾಗಿದ್ದಾನೆ ಎಂದು ತಿಳಿಸಿದರು.
ಬರದಿಂದ ಬೇಸತ್ತಿರುವ ರೈತರಿಗೆ ಅನುಕೂಲ: ಇನ್ನು, ಈ ಕುಟುಂಬ ಎಕರೆಗಟ್ಟಲೆ ಜಮೀನಿನಲ್ಲಿ ಗೋಶಾಲೆ ತೆರೆದಿದೆ. ಈ ಗೋಶಾಲೆಯಲ್ಲಿ ಜಾನುವಾರುಗಳಿಗೆ ಮೇವು, ನೀರು ಸೌಲಭ್ಯ ಕಲ್ಪಿಸಲಾಗಿದೆ. ಹಾವೇರಿ ಜಿಲ್ಲೆಯ ಪ್ರಥಮ ಖಾಸಗಿ ಗೋಶಾಲೆ ಎಂಬ ಹೆಗ್ಗಳಿಕೆಗೆ ಸಂದೇಶ ಗೋಶಾಲೆ ಪಾತ್ರವಾಗಿದೆ. ಪ್ರಸ್ತುತ ರೈತರು ಬರದಿಂದ ಕಂಗೆಟ್ಟಿದ್ದಾರೆ. ಜಾನುವಾರುಗಳಿಗೆ ಮೇವು ಮತ್ತು ನೀರು ಹಾಕುವುದು ರೈತರಿಗೆ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ರೈತರು ಗೋಶಾಲೆಗೆ ತಮ್ಮ ಜಾನುವಾರುಗಳನ್ನು ತಂದು ಬಿಡಬಹುದು. ನಂತರ ತಮ್ಮ ಪರಿಸ್ಥಿತಿ ಸುಧಾರಿಸಿದ ಮೇಲೆ ಜಾನುವಾರುಗಳನ್ನು ಮರಳಿ ತಮ್ಮ ಮನೆಗೆ ಕರೆದೊಯ್ಯಬಹುದಾಗಿದೆ.
ಇಲ್ಲಿ ಅನಾಥ, ವಯೋವೃದ್ಧ ಜಾನುವಾರುಗಳಿಗೂ ಸಹ ಆಶ್ರಯ ಕಲ್ಪಿಸಲಾಗಿದೆ. ಈಗಾಗಲೇ 10ಕ್ಕೂ ಅಧಿಕ ಜಾನುವಾರುಗಳು ಸಂದೇಶ ಗೋಶಾಲೆಯಲ್ಲಿ ಆಶ್ರಯ ಪಡೆದಿವೆ. ಸಂದೇಶರ ಹೆಸರಿನಲ್ಲಿ ಗೋಶಾಲೆ ತೆರೆದಿರುವುದಕ್ಕೆ ಆತನ ಸ್ನೇಹಿತರು, ಸಂಬಂಧಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಸಾವು ಕಂಡ ಮಗನ ಹೆಸರು ಅಜರಾಮರವಾಗಿಸುವ ಈ ದಂಪತಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬರಗಾಲದ ನಡುವೆ ರಾಜ್ಯದಲ್ಲಿ ಬಿತ್ತನೆಯಾಗಿದ್ದೆಷ್ಟು, ಫಸಲು ನಷ್ಟವಾಗಿದ್ದೆಷ್ಟು?