ಹಾವೇರಿ: ನೆರೆ ಸಂತ್ರಸ್ತರ ಪರಿಹಾರ ವಿತರಣೆಯಲ್ಲಿನ ಅವ್ಯವಹಾರ ಪ್ರಕರಣಗಳು ದಿನದಿನಕ್ಕೆ ಬಯಲಿಗೆ ಬರಲಾರಂಭಿಸಿವೆ. ಹಾವೇರಿ ಜಿಲ್ಲೆಯಲ್ಲಿ ಕರ್ತವ್ಯಕ್ಕೆ ರಾಜೀನಾಮೆ ನೀಡಿ ಬೆಳಗಾವಿ ಜಿಲ್ಲೆಯಲ್ಲಿ ಕೆಲಸಕ್ಕೆ ಸೇರಿದ್ದ ಗ್ರಾಮ ಲೆಕ್ಕಾಧಿಕಾರಿಯೊಬ್ಬ ಹಣ ಲಪಟಾಯಿಸಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಬಸವರಾಜ್ ಹುನ್ನಾರ ಎಂಬಾತ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಗುಡ್ಡಗುಡ್ಡಾಪುರದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡಿದ್ದ. ನಂತರ ತಮ್ಮ ಊರಿನ ಸಮೀಪದ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಕೆಲಸ ಸಿಕ್ಕಿದ್ದರಿಂದ ಅಲ್ಲಿ ಕೆಲಸಕ್ಕೆ ಸೇರಿದ್ದ. ಆದರೆ, ಗುಡ್ಡಾಪುರದಲ್ಲಿ ಗ್ರಾಮ ಲೆಕ್ಕಾಧಿಕಾರಿ ಪಾಸ್ ವರ್ಡ್ ನೆನಪಿನಲ್ಲಿಟ್ಟುಕೊಂಡಿದ್ದ ಬಸವರಾಜ್, ಬೆಳಗಾವಿಯ ಅಥಣಿಯಲ್ಲಿನ ತನ್ನ ಸ್ನೇಹಿತರಿಗೆ ನೆರೆ ಪರಿಹಾರದ ಹಣ ಹಾಕಿದ್ದಾನೆ. ಸುಮಾರು ಮೂರು ಜನ ಸ್ನೇಹಿತರಿಗೆ 85 ಸಾವಿರ ರೂಪಾಯಿ ಹಣವನ್ನ ವರ್ಗಾಯಿಸಿದ್ದಾರೆ ಎಂದು ಹಾವೇರಿ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ತಿಳಿಸಿದ್ದಾರೆ.
ಇನ್ನೂ ಈ ಕುರಿತಂತೆ ದೂರು ದಾಖಲಿಸಲಾಗಿದ್ದು ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ತಿಳಿಸಿದ್ದಾರೆ.