ರಾಣೆಬೆನ್ನೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸತತವಾಗಿ ಬಂದ್ ಮಾಡುತ್ತಿರುವುದರಿಂದ ರಾಣೆಬೆನ್ನೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಹೌದು, ರಾಣೆಬೆನ್ನೂರು ನಗರ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಪ್ರತಿ ನಿತ್ಯವೂ ವ್ಯಾಪಾರ ನಡೆಯುತ್ತದೆ. ಪ್ರಮುಖವಾಗಿ ಸೋಮವಾರ, ಮಂಗಳವಾರ ಹತ್ತಿ ಮಾರಾಟ ಇರುತ್ತೆ. ಇನ್ನುಳಿದ ದಿನ ಎಲ್ಲಾ ದವಸ-ಧಾನ್ಯಗಳ ವ್ಯಾಪಾರ ನಡೆಯುತ್ತದೆ. ಆದರೆ ಕೊರೊನಾ ವೈರಸ್ ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಮಾರುಕಟ್ಟೆಯನ್ನು 15 ದಿನಗಳಿಂದ ಬಂದ್ ಮಾಡಿರುವ ಕಾರಣ ಸುಮಾರು 10 ಕೋಟಿ ರೂ. ಮೌಲ್ಯದ ವ್ಯಾಪಾರ ವಹಿವಾಟು ನಿಂತಿದೆ. ಇದರಲ್ಲಿ ಪ್ರಮುಖವಾಗಿ ಭಾನುವಾರ ನಡೆಯುವ ದನದ ಸಂತೆ ಮೇಲೆ ಕೊರೊನಾ ಕೆಂಗಣ್ಣು ಬಿದ್ದಿದ್ದು, ಎರಡು ವಾರದಿಂದ ಯಾವುದೇ ವ್ಯಾಪಾರ-ವಹಿವಾಟು ನಡೆದಿಲ್ಲ ಎಂದು ತಿಳಿದುಬಂದಿದೆ.
ಇಲ್ಲಿನ ಮಾರುಕಟ್ಟೆ ಮೆಕ್ಕೆಜೋಳ ಮತ್ತು ಹತ್ತಿ ವ್ಯಾಪಾರಕ್ಕೆ ಪ್ರಸಿದ್ಧವಾಗಿದೆ. ಕೊರೊನಾ ಭೀತಿಯಿಂದ ಮಾರ್ಕೆಟ್ ಬಂದ್ ಆಗಿರುವುದರಿಂದ 1 ಕೋಟಿ 45 ಲಕ್ಷ ರೂಪಾಯಿಯ ವಹಿವಾಟು ನಿಂತಿದೆ. ಇನ್ನು ದನದ ಮಾರುಕಟ್ಟೆ ವಹಿವಾಟು ಬಂದ್ ಆಗಿರುವುದರಿಂದ ಕುರಿ, ಎತ್ತು, ಆಕಳು, ಎಮ್ಮೆ ಮಾರಾಟವಾಗದ ಕಾರಣ ಸುಮಾರು 2 ಕೋಟಿ ವ್ಯಾಪಾರ ಸ್ಥಗಿತವಾಗಿದೆ ಎಂದು ವಾಣಿಜ್ಯೋದ್ಯಮ ಸಂಸ್ಥೆಯವರು ಮಾಹಿತಿ ನೀಡಿದ್ದಾರೆ.