ಹಾವೇರಿ: ಮೃತಪಟ್ಟವರ ಅಂತ್ಯಕ್ರಿಯೆ ಇರಲಿ, ಸ್ಮಶಾನದ ಸಮೀಪಕ್ಕೂ ಮೃತರ ಸಂಬಂಧಿಕರು ಬಾರದಿರೋ ಘಟನೆ ಶಿಗ್ಗಾಂವಿ ಪಟ್ಟಣದಲ್ಲಿ ನಡೆದಿದೆ.
ಕೊರೊನಾ ಸೋಂಕು ದೃಢಪಟ್ಟಿದ್ದ ಶಿಗ್ಗಾಂವಿ ಪಟ್ಟಣದ 75 ವರ್ಷದ ವೃದ್ಧೆ ಬೆಳಗ್ಗೆ ಮೃತಪಟ್ಟಿದ್ದರು. ನಂತರ ಕೋವಿಡ್-19 ಆಸ್ಪತ್ರೆ ವೈದ್ಯರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಮೃತರ ಮನೆಯವರಿಗೆ ಮಾಹಿತಿ ಮುಟ್ಟಿಸಿದರೂ, ಸಂಬಂಧಿಕರು ಆಸ್ಪತ್ರೆಯತ್ತ ಸುಳಿಯಲಿಲ್ಲ.
ಅಂತ್ಯಕ್ರಿಯೆ ವೇಳೆ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ಮೃತರ ಕುಟುಂಬದ ಐವರಿಗೆ ಅವಕಾಶ ಕಲ್ಪಿಸಿ, ಪಿಪಿಇ ಕಿಟ್ ಸೇರಿದಂತೆ ಅಂತ್ಯಕ್ರಿಯೆಗೆ ಬಂದ ಕುಟುಂಬದ ಸದಸ್ಯರಿಗೆ ಅಗತ್ಯ ರಕ್ಷಣಾ ಸಾಮಗ್ರಿಗಳನ್ನು ನೀಡೋದಾಗಿ ಹೇಳಿತ್ತು. ಆದರೂ ಮೃತರ ಸಂಬಂಧಿಕರು ಅಂತ್ಯಕ್ರಿಯೆಗೆ ಬರದೆ ನೀವೆ ಅಂತ್ಯಕ್ರಿಯೆ ನೆರವೇರಿಸಿ ಎಂದು ಜಿಲ್ಲಾಸ್ಪತ್ರೆ ವೈದ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದಾರೆ.
ಯಾವೊಬ್ಬ ಕುಟುಂಬ ಸದಸ್ಯರು ಸ್ಮಶಾನಕ್ಕೆ ಬರದಿದ್ದರಿಂದ ಆರೋಗ್ಯ ಇಲಾಖೆಯವರೇ ಸರ್ಕಾರದ ನಿಯಮದಂತೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.