ಹಾವೇರಿ: ಪ್ರಸ್ತುತ ವರ್ಷ ಕೊರೊನಾ ಇರುವ ಕಾರಣ ಒಂದೇ ಊರಲ್ಲಿ ಜೋಕುಮಾರನನ್ನ ಆಡಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಭಕ್ತರಿಗೆ ಕಾಡಿಗೆ, ಬೆಣ್ಣಿ, ಅಂಬಲಿ ಪ್ರಸಾದ ನೀಡುತ್ತಾರೆ. ಈತನಲ್ಲಿ ಬೇಡಿಕೊಂಡರೆ ಭಕ್ತರ ಈಷ್ಟಾರ್ಥ ಸಿದ್ಧಿಯಾಗುದೆ ಎಂಬ ನಂಬಿಕೆ ಇದೆ. ಜೋಕುಮಾರನ ಕುರಿತಂತೆ ಉತ್ತರ ಕರ್ನಾಟಕದಲ್ಲಿ ಹಲವು ಕಥೆಗಳಿವೆ. ಈ ವಿಶಿಷ್ಟ ಜೋಕುಮಾರನ ಸಂಪ್ರದಾಯದ ಕುರಿತ ವಿಶೇಷ ವರದಿ ಇಲ್ಲಿದೆ.
ಉತ್ತರ ಕರ್ನಾಟಕದ ವಿಶೇಷ ಆಚರಣೆಗಳಲ್ಲಿ ಒಂದು ಜೋಕುಮಾರನ ಜನನ ಮತ್ತು ಮರಣ. ಗಣೇಶನ ಆಗಮನದ 5 ದಿನಗಳ ನಂತರ ಅಷ್ಟಮಿಯ ದಿನ ರಾತ್ರಿ ಜೋಕುಮಾರನ ಜನನವಾಗುತ್ತೆ. ಮೂಲ ನಕ್ಷತ್ರದಲ್ಲಿ ಜೋಕುಮಾರ ಜನಿಸುತ್ತಾನೆ. ಈತನ ಮೂರ್ತಿಯನ್ನ ಬಡಿಗೇರ ಮನೆತನದವರು ಮಾಡುತ್ತಾರೆ. ನಂತರ ಮೂರ್ತಿಯನ್ನ ಬಾರ್ಕಿ ಮನೆತನದವರು ಬುಟ್ಟಿಯಲ್ಲಿ ಇಟ್ಟುಕೊಂಡು ಏಳು ಊರು ಸುತ್ತುವುದು ವಾಡಿಕೆ.
ಆದರೆ ಪ್ರಸ್ತುತ ವರ್ಷ ಕೊರೊನಾ ಇರುವ ಹಿನ್ನೆಲೆಯಲ್ಲಿ ಒಂದೇ ಊರಿನ ವಿವಿಧ ಓಣಿಗಳಲ್ಲಿ ಜೋಕುಮಾರನ ಹೊತ್ತ ಮಹಿಳೆಯರು ಕಾಣಸಿಗುತ್ತಾರೆ. ಕಥೆಯ ಪ್ರಕಾರ ಜೋಕುಮಾರ ಶಿವಪಾರ್ವತಿಯರ ಮಗ. ಭೂಲೋಕದಲ್ಲಿ ಗಣೇಶನನ್ನ ಚೆನ್ನಾಗಿ ನೋಡಿಕೊಂಡರೆ ಜೋಕುಮಾರನನ್ನ ಸರಿಯಾಗಿ ನೋಡಿಕೊಳ್ಳುವುದಿಲ್ಲ. ಈತ ಶಿವ-ಪಾರ್ವತಿಯರಿಗೆ ಭೂಲೋಕದ ನೈಜತೆ ಬಗ್ಗೆ ತಿಳಿಸುತ್ತಾನೆ. ಪ್ರಸ್ತುತ ವರ್ಷದ ಕೊರೊನಾ ಕುರಿತು ಜೋಕುಮಾರ ಶಿವ-ಪಾರ್ವತಿಗೆ ತಿಳಿಸಲಿದ್ದಾನೆ ಎನ್ನುತ್ತಾರೆ ಆತನನ್ನು ಹೊತ್ತ ಮಹಿಳೆಯರು.
ಜೋಕುಮಾರ ಹುಟ್ಟಿನಿಂದ ಬಡಿಗೇರ, ಬಾರ್ಕಿ, ಹರಿಜನ ಮತ್ತು ಅಗಸ ಮಡಿವಾಳರ ಸಮುದಾಯಗಳಲ್ಲಿ ವಿವಿಧ ಹಂತಗಳನ್ನ ಕಾಣುತ್ತಾನೆ. ಬಾರ್ಕೇರ ಮನೆತನದವರು ಏಳು ದಿನಗಳ ಕಾಲ ಜೋಕುಮಾರನನ್ನ ಮನೆ ಮನೆಗೆ ಹೊತ್ತು ತರುತ್ತಾರೆ. ಮನೆಯ ಮುಂದೆ ಜೋಕುಮಾರನನ್ನು ಇಟ್ಟು ಅವನ ಕುರಿತ ಹಾಡುಗಳನ್ನು ಹಾಡುತ್ತಾರೆ. ಜೊತೆಗೆ ಭಕ್ತರಿಗೆ ಜೋಕುಮಾರ ಅಂಬಲಿ, ಕಾಡಿಗೆ ಮತ್ತು ಬೆಣ್ಣಿ ನೀಡುತ್ತಾರೆ. ಇದರಿಂದ ರೈತರ ಬೆಳೆಗಳು ಹುಲುಸಾಗಿ ಬೆಳೆಯುತ್ತವೆ. ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತವೆ ಮತ್ತು ಮಾತು ಬರದವರಿಗೆ ಮಾತು ಬರುತ್ತೆ ಎಂಬ ನಂಬಿಕೆ ಸಹ ಇದೆ. ಜೋಕುಮಾರ ರಸಿಕತೆಯ ಮತ್ತೊಂದು ಹೆಸರು. ಹೀಗಾಗಿ ರಸಿಕರಿಗೆ ಜೋಕುಮಾರ ಎಂದು ಕರೆಯುವ ಸಂಪ್ರದಾಯ ಸಹ ಉತ್ತರ ಕರ್ನಾಟಕದಲ್ಲಿದೆ.
ಜೋಕುಮಾರನ ಕುರಿತಂತೆ ಉತ್ತರ ಕರ್ನಾಟಕದಲ್ಲಿ ಹಲವು ಕಥೆಗಳಿವೆ. ಜೋಕುಮಾರ ಸಹ ಗಣೇಶನಂತೆ ಶಿವ-ಪಾರ್ವತಿಯರ ಪುತ್ರ. ಗಣೇಶನು ಭೂಲೋಕಕ್ಕೆ ಬಂದು ಭಕ್ತರ ಮನೆಗೆ ಬಂದಾಗ ಭಕ್ತರು ಗಣೇಶನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಆತ ಶಿವನ ಮುಂದೆ ಭೂಮಿಯಲ್ಲಿ ಜನರು ಉತ್ತಮವಾಗಿದ್ದಾರೆ ಎಂದು ತಿಳಿಸುತ್ತಾನೆ. ಆದರೆ ಜೋಕುಮಾರ ರೈತರ ಮನೆ ಮನೆಗೆ ಅಲೆದಾಡಿ ಭೂಲೋಕದ ನೈಜ ಜೀವನವನ್ನ ಶಿವ-ಪಾರ್ವತಿಯರಿಗೆ ತಿಳಿಸುತ್ತಾನೆ ಎನ್ನಲಾಗುತ್ತದೆ. ಅಷ್ಟಮಿ ಮತ್ತು ಅನಂತ ಚತುರ್ಥಿ ವೇಳೆ ಉತ್ತರ ಕರ್ನಾಟಕದಲ್ಲಿ ಜೋಕುಮಾರನ ಹೊತ್ತ ಮಹಿಳೆಯರು ಕಾಣುತ್ತಾರೆ.