ರಾಣೆಬೆನ್ನೂರು: ನಗರದ ಬಹು ನಿರೀಕ್ಷಿತ 24*7 ಕುಡಿಯುವ ನೀರಿನ ಯೋಜನೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ನಗರಸಭಾ ಕಾರ್ಯಾಲಯ ಮುಂದೆ ನಗರಸಭಾ ಸದಸ್ಯರ ಪ್ರತಿಭಟನೆ ಮಾಡಿದ್ದಾರೆ.
ರಾಣೆಬೆನ್ನೂರು ನಗರಕ್ಕೆ ಅಮೃತ ಸಿಟಿ ಯೋಜನೆ ಅಡಿ ಸುಮಾರು 118 ಕೋಟಿ ವೆಚ್ಚದ 24*7 ಕುಡಿಯುವ ನೀರಿನ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಎರಡು ತಿಂಗಳ ಹಿಂದೆ ನಗರಸಭೆಯ ಎಲ್ಲ 34 ಸದಸ್ಯರು ಕಾಮಗಾರಿ ಕಳಪೆಯಾಗಿದೆ ಎಂದು ಸಹಿ ಮಾಡುವ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ನಗರಸಭಾ ಆಯುಕ್ತರಿಗೆ ಮನವಿ ಮಾಡಲಾಗಿತ್ತು.
ಆದರೆ, ಇದರ ಬಗ್ಗೆ ತನಿಖೆ ಮಾಡಬೇಕಾದ ಅಧಿಕಾರಿಗಳು ಕೂಡ ಯಾವುದೇ ಕ್ರಮಕೈಗೊಂಡಿಲ್ಲ ಎಂದು ನಗರಸಭಾ ಸದಸ್ಯ ನಿಂಗರಾಜ ಕೋಡಿಹಳ್ಳಿ ತಿಳಿಸಿದರು. ಇನ್ನೂ ಕಾಮಗಾರಿ ಮಾಡುವ ವಿವೋಲ್ ಕಂಪನಿ ಗುತ್ತಿಗೆದಾರರು ಪೈಪ್ಲೈನ್ ಅನ್ನು ಚರಂಡಿ ಮಧ್ಯೆ ಮತ್ತು ಭೂಮಿಯ ಮೇಲೆ ಹಾಕಿದ್ದಾರೆ. ಕಾಮಗಾರಿ ಯೋಜನಾ ವರದಿ ಪ್ರಕಾರ ಪೈಪ್ ಲೈನ್ ಮೂರು ಅಡಿ ಆಳ ಮತ್ತು ಐದು ಅಡಿ ಅಗಲ ಹಾಕಬೇಕಾಗಿದೆ. ಆದರೆ ಇದನ್ನು ಸರಿಯಾಗಿ ಮಾಡದೇ ಕಾಮಗಾರಿಯನ್ನು ಕಳಪೆ ಮಾಡಿಸಿದ್ದಾರೆ.
ನಗರದಲ್ಲಿ ಪೈಪ್ ಲೈನ್ ಹಾಕಲು ಸುಮಾರು 145 ಕಡೆ ರಸ್ತೆಗಳನ್ನು ಅಗೆಯಲಾಗಿದೆ. ಇದನ್ನು ಸರಿಯಾಗಿ ದುರಸ್ತಿ ಮಾಡಬೇಕಾದ ಗುತ್ತಿಗೆದಾರರು ಕಾಟಚಾರಕ್ಕೆ ಮಾಡಿ ಅದನ್ನು ಸಹ ಕಳಪೆ ಮಾಡಿದ್ದಾರೆ. ಇದರಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು, ನಿತ್ಯ ವಾಹನ ಸವಾರರು ಪರದಾಡುವಂತಹ ಸ್ಥಿತಿ ಬಂದಿದೆ.
ನಗರದ ಜನತೆಗೆ ನೀರು ಸರಬರಾಜು ಮಾಡಲು ಐದು ಹೊಸ ಟ್ಯಾಂಕ್ ಸಹ ನಿರ್ಮಾಣ ಮಾಡಲಾಗಿದ್ದು, ಅವುಗಳು ಸಹ ಸಂಪೂರ್ಣ ಕಳಪೆಯಾಗಿದೆ ಎಂದು ಎಲ್ಲ ಅಧಿಕಾರಿಗಳು ಮತ್ತು ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೆ, ಇದರ ಬಗ್ಗೆ ಯಾರು ಗಮನ ಹರಿಸುತ್ತಿಲ್ಲ ಎಂದರು. ಅಂದು ಕಾಮಗಾರಿ ವಿರುದ್ಧ ಎಲ್ಲ ಸದಸ್ಯರು ಸಹಿ ಮಾಡಿದ್ದರು, ಆದರೆ ಇಂದು ಹಲವು ಸದಸ್ಯರು ಪ್ರತಿಭಟನೆಗೆ ಬಾರದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.