ಹಾವೇರಿ: 2023ರ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ಸಂಕಲ್ಪ ಮಾಡಿರುವ ಈ ಯಾತ್ರೆ ಯಶಸ್ವಿಯಾಗುತ್ತಿದೆ. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಸುನಾಮಿ ಎದ್ದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡುತ್ತಾ, ಜಿಲ್ಲೆಯ ಕುರಿಗಾಹಿಗಳಿಗೆ ವಿಶೇಷ ಯೋಜನೆಯನ್ನೂ ಪ್ರಕಟಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದ ಸಿಎಂ, ಅವರು ಐದು ವರ್ಷ ಆಡಳಿತ ನಡೆಸಿ ಇಡೀ ಕರ್ನಾಟಕವನ್ನು ಅಧೋಗತಿಗೆ ತಂದರು. ಅವರ ಭಾಗ್ಯಗಳೆಲ್ಲ ದೌರ್ಭಾಗ್ಯಗಳಾಗಿವೆ. ಜನ ಅವರನ್ನು ಕಿತ್ತೊಗೆದಿದ್ದಾರೆ. ಈಗ ಭಾರತ್ ಜೋಡೋ ನಾಟಕ ಕಂಪನಿ ಶುರು ಮಾಡಿದ್ದಾರೆ ಎಂದರು.
ರಾಹುಲ್ ಗಾಂಧಿ ವಿಫಲ ನಾಯಕ: ರಾಹುಲ್ ಯಾವ ರಾಜ್ಯಕ್ಕೆ ಹೋಗ್ತಾರೋ ಅಲ್ಲಿ ಅವರು ಅಧಿಕಾರಕ್ಕೆ ಬರಲ್ಲ. ಅವರು ಇಲ್ಲಿಗೆ ಬಂದು ಹೋಗಿದ್ದರಿಂದ ಇಲ್ಲಿ ಕಾಂಗ್ರೆಸ್ ಹುಲ್ಲು ಹುಟ್ಟೋದಿಲ್ಲ ಎಂದು ಟೀಕಿಸಿದರು.
ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಶಾಲಾ ಸರ್ಟಿಫಿಕೇಟ್ ನೋಡಲಿ. ಅದೇ ಸರ್ಟಿಫಿಕೇಟ್ನಿಂದ ಶಾಲೆ ಕಲಿತು ಶಾಸಕರಾಗಿ, ಮಂತ್ರಿಯಾಗಿ ಈಗ ಹಿಂದೂ ಅಂದರೆ ಹೊಲಸು ಶಬ್ದ ಎನ್ನುತ್ತಿದ್ದಾರೆ. ನಾವು ಹೊಲಸಿನಿಂದ ಕೂಡಿದವರಾ?. ನಿಮ್ಮ ವಿಚಾರ ಹೊಲಸಿನಿಂದ ಕೂಡಿದೆ. ಎಲ್ಲಿದ್ದೀರಾ ಸಿದ್ದರಾಮಣ್ಣ?, ಸತೀಶ್ ಜಾರಕಿಹೊಳಿ ಬಗ್ಗೆ ಇನ್ನೂ ಏನೂ ಮಾತನಾಡಿಲ್ಲ. ಸಿದ್ದರಾಮಯ್ಯ, ರಾಹುಲ್ ಗಾಂಧಿ ನಿಮ್ಮ ಬೆಂಬಲ ಇದೆಯಾ? ಎಂದು ಸಿಎಂ ಬೊಮ್ಮಾಯಿ ಪ್ರಶ್ನಿಸಿದರು.
20 ಕುರಿ 1 ಮೇಕೆ: ಹಾವೇರಿ ಜಿಲ್ಲೆಯ ಪ್ರತಿ ಕುರಿಗಾಹಿಗೆ 20 ಕುರಿಗಳು ಹಾಗೂ ಒಂದು ಮೇಕೆ ಕೊಡುವ ಯೋಜನೆ ರೂಪಿಸಿರುವುದಾಗಿ ಮುಖ್ಯಮಂತ್ರಿಗಳು ಇದೇ ವೇಳೆ ತಿಳಿಸಿದರು.
ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು: ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬುವುದಕ್ಕೆ ನೀವೇ ಸಾಕ್ಷಿ. ಕಾಂಗ್ರೆಸ್ನವರು ಹಣ ಬಲ, ಜಾತಿ ಬಲದಿಂದ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ಆದರೆ ಯಾವ ಕಾರಣಕ್ಕೂ ನೀವು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡುಗು. ಅದರ ಮೇಲೆ ಯಾರೂ ನಿಲ್ಲುವುದಿಲ್ಲ. ರಾಹುಲ್ ಗಾಂಧಿ 20 ದಿನ ನಮ್ಮ ರಾಜ್ಯದಲ್ಲಿ ಪಾದಯಾತ್ರೆ ಮಾಡಿದ್ರೂ ಯಾವ ಪರಿಣಾಮವಾಗಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಿಸಾನ್ ಸಮ್ಮಾನ್ ಯೋಜನೆಯಿಂದ ನಮ್ಮ ರೈತರಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಹಣ ಸಿಗುತ್ತಿದೆ. ಪ್ರತಿ ಹಳ್ಳಿಗೆ ಶುದ್ಧ ಕುಡಿಯುವ ನೀರು ಕೊಡುವ ಕಾರ್ಯಕ್ರಮ ನಡೆಯುತ್ತಿದೆ. ಬೊಮ್ಮಾಯಿಯವರು ಸಿಎಂ ಆದ್ಮೇಲೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಇದನ್ನೂ ಓದಿ: ಕರ್ನಾಟಕವನ್ನು ಕಾಂಗ್ರೆಸ್ನವರು ಎಟಿಎಂ ಮಾಡಿಕೊಂಡಿದ್ದರು : ಸಿಎಂ ಬೊಮ್ಮಾಯಿ ವಾಗ್ದಾಳಿ