ಹಾವೇರಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಸವಣೂರು ಕ್ಷೇತ್ರದಲ್ಲಿ ಸ್ಫರ್ಧಿಸುವುದಾಗಿ ಈಗಾಗಲೇ ತಿಳಿಸಿದ್ದಾರೆ. ಇಂದು ಅವರ ಪುತ್ರ ಭರತ್ ಬೊಮ್ಮಾಯಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ತಂದೆಯ ಪರ ಮತಯಾಚನೆ ಮಾಡಿದರು. ಶಿಗ್ಗಾಂವಿ ತಾಲೂಕಿನ ಕಾರಡಗಿ ಗ್ರಾಮಕ್ಕೆ ಆಗಮಿಸಿದ ಭರತ್ ಬೊಮ್ಮಾಯಿ, ಮನೆ ಮನೆಗೆ ತೆರಳಿ ತಂದೆಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.
"ಕ್ಷೇತ್ರದಲ್ಲಿ ತಂದೆಯ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ತಂದೆ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಪ್ರತಿ ಹಳ್ಳಿ ಹಳ್ಳಿ ಮತ್ತು ಮತದಾರನ ಮನೆ ಮನೆಗೂ ತಲುಪಿಸಲಾಗಿದೆ. ಈ ನಿಟ್ಟಿನಲ್ಲಿ ಮತಯಾಚನೆ ಮಾಡುತ್ತಿದ್ದೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ನಾನು ತಂದೆಯ ಪರ ಕ್ಯಾಂಪೇನ್ ಮಾಡಿದ್ದೆ. ಆದರೆ ಇಷ್ಟು ಒತ್ತು ಕೊಟ್ಟಿರಲಿಲ್ಲ. ಪ್ರಸ್ತುತ ಚುನಾವಣೆಯಲ್ಲಿ ತಂದೆಗೆ ರಾಜ್ಯದ ಜವಾಬ್ದಾರಿ ಹೆಚ್ಚಿದೆ. ಹೀಗಾಗಿ ಅವರು ರಾಜ್ಯದಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಓಡಾಡಬೇಕಿದೆ. ನಾನು ಶಿಗ್ಗಾಂವಿ ಸವಣೂರು ಕ್ಷೇತ್ರದ ಜವಾಬ್ದಾರಿ ತೆಗೆದುಕೊಂಡು ಕ್ಷೇತ್ರದಲ್ಲಿ ಮತಯಾಚನೆ ಮಾಡುತ್ತಿದ್ದೇನೆ" ಎಂದು ಭರತ್ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ : ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ಮಾಜಿ ಸಚಿವ ಮನೋಹರ್ ತಹಶೀಲ್ದಾರ್: ಕಣ್ಣೀರು ಹಾಕಬೇಡಿ ಎಂದ ಬೆಂಬಲಿಗರು
ಶಿಗ್ಗಾಂವಿ ಸವಣೂರು ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿಯವರು ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ. ಶುದ್ದ ಕುಡಿಯುವ ನೀರು, ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲೆಗಳು, ಕೆರೆಗಳನ್ನು ತುಂಬಿಸುವ ಕಾರ್ಯ, ಪ್ರತಿ ಮನೆಗೆ ಸಿಮೆಂಟ್ ರಸ್ತೆಗಳೂ ಸೇರಿದಂತೆ ಅಭಿವೃದ್ದಿ ಕಾರ್ಯ ಮಾಡಿದ್ದಾರೆ. ಕ್ಷೇತ್ರಕ್ಕೆ ಜವಳಿ ಪಾರ್ಕ್ ಬರಲಿದೆ. ಈ ಮೂಲಕ ಸಾವಿರಾರು ಜನರಿಗೆ ಉದ್ಯೋಗ ಸಿಗುತ್ತೆ. ಯಾರು ಎಷ್ಟೇ ಅಪಪ್ರಚಾರ ಮಾಡಿದರೂ ಸಹ ಇಲ್ಲಿಯ ಜನ ನಮ್ಮ ತಂದೆಗೇ ಮತ ಹಾಕುತ್ತಾರೆ. ಕ್ಷೇತ್ರದಲ್ಲಿ ತಂದೆಯ ಪರವಾದ ವಾತಾವರಣವಿದೆ ಎಂದರು.
ಇದಕ್ಕೂ ಮೊದಲು ಗ್ರಾಮದೇವಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದರು. ಗ್ರಾಮದ ಮುಖಂಡರು ಹಾಗೂ ಯುವಕರು ಸಾಥ್ ನೀಡಿದರು. ಪ್ರಚಾರದಲ್ಲಿ ಬಿಜೆಪಿ ಮುಖಂಡೆ ಶೋಭಾ ನಿಸ್ಸೀಮಗೌಡ್ರ ಪಾಲ್ಗೊಂಡಿದ್ದರು.
ಇದನ್ನೂ ಓದಿ : ಸಿಎಂ ಬೊಮ್ಮಾಯಿ ವಿರುದ್ಧ ಸಲೀಂ ಅಹ್ಮದ್ ಸ್ಪರ್ಧೆಗೆ ಕಾರ್ಯಕರ್ತರ ಒತ್ತಾಯ