ಹಾವೇರಿ: ಏ.15ರಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಲಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಚೆನ್ನಮ್ಮ ವೃತ್ತದಿಂದ ಆರಂಭವಾಗಲಿರುವ ರೋಡ್ ಶೋ ಬಳಿಕ ಹಳೆ ಬಸ್ ನಿಲ್ದಾಣದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸುಮಾರು 2 ಕಿ.ಮೀ ಸಾಗಲಿದೆ.
ರೋಡ್ ಶೋನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದ ಪ್ರಹ್ಲಾದ್ ಜೋಶಿ, ಸಚಿವ ಬಿ.ಸಿ ಪಾಟೀಲ್ ಮತ್ತು ಚಿತ್ರನಟ ಸುದೀಪ್ ಪಾಲ್ಗೊಳ್ಳಲಿದ್ದರೆ. ಬಳಿಕ ತಾಲೂಕಾ ಕ್ರೀಡಾಂಗಣದಲ್ಲಿ ರೋಡ್ ಶೋ ಮುಕ್ತಾಯಗೊಳ್ಳಲಿದೆ. ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ನಡ್ಡಾ, ಕಟೀಲ್, ಸುದೀಪ್ ಹಾಗೂ ಸಿಎಂ ಬೊಮ್ಮಾಯಿ ಸೇರಿದಂತೆ ವಿವಿಧ ಮುಖಂಡರು ಭಾಷಣ ಮಾಡಲಿದ್ದಾರೆ. ನಂತರ ಸಿಎಂ ಬೊಮ್ಮಾಯಿ ನಾಮಪತ್ರ ಸಲ್ಲಿಸಲಿದ್ದಾರೆ. ಇವರಿಗೆ ನಡ್ಡಾ ಸೇರಿದಂತೆ ವಿವಿಧ ಮುಖಂಡರು ಸಾಥ್ ನೀಡಲಿದ್ದಾರೆ.
ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದ ಸಿಎಂ: ಬೊಮ್ಮಾಯಿ ಅವರು ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಏ.15ರಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ಸಂಸದ ಶಿವಕುಮಾರ್ ಉದಾಸಿ, ಸಚಿವ ಸಿ.ಸಿ ಪಾಟೀಲ್, ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ಹಿರಿಯ ಮುಖಂಡರು ಮತ್ತು ಕುಟುಂಬಸ್ಥರು ಸಿಎಂ ಬೊಮ್ಮಾಯಿಗೆ ಸಾಥ್ ನೀಡಿದ್ದರು. ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಸಿಎಂ, ಕ್ಷೇತ್ರದಲ್ಲಿ ಈ ಹಿಂದಿನಕ್ಕಿಂತಲೂ ಹೆಚ್ಚಿನ ಬೆಂಬಲ ಇದೆ. ತಾಲೂಕಿನ ಅಭಿವೃದ್ಧಿಯನ್ನು ಕ್ಷೇತ್ರದ ಜನರು ನೋಡಿದ್ದು, ಅಭೂತಪೂರ್ವ ಬೆಂಬಲ ಸಿಕ್ಕಿದೆ. ಚುನಾವಣೆ ಅಂದ್ರೆನೇ ಕುಸ್ತಿ. ಎದುರಾಳಿ ಯಾರೇ ಬಂದ್ರೂ ಪರವಾಗಿಲ್ಲ ಎಂದು ತಿಳಿಸಿದ್ದರು. ಇನ್ನು ಇದೇ ವೇಳೆ ಪಕ್ಷದಲ್ಲಿನ ನಾಯಕರ ಅಸಮಧಾನದ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಹಾಲಿ ಶಾಸಕರಿಗೆ ಟಿಕೆಟ್ ಸಿಗದಿದ್ದಾಗ ಬಂಡಾಯ ಸಹಜ. ಕೊನೆಯ ಪಟ್ಟಿ ಬಿಡುಗಡೆಯಾಗಲಿದೆ. ಎಲ್ಲವೂ ಶಮನ ಆಗುತ್ತದೆ ಎಂದು ಹೇಳಿದ್ದರು.
ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಗ್ರಾಮದೇವತೆ ದರ್ಶನ ಪಡೆದು ನಾಮಪತ್ರ ಸಲ್ಲಿಸಿದ ಸಿಎಂ ಬೊಮ್ಮಾಯಿ
ಬೃಹತ್ ರ‍್ಯಾಲಿಯಲ್ಲಿ ಕಿಚ್ಚ ಸುದೀಪ್ ಭಾಗಿ: ಈಗಾಗಲೇ ಮಾಧ್ಯಮಗೋಷ್ಟಿ ನಡೆಸಿ ಸಿಎಂ ಬೊಮ್ಮಾಯಿ ಅವರಿಗೆ ಈ ಚುನಾವಣೆಯಲ್ಲಿ ಬೆಂಬಲ ವ್ಯಕ್ತಪಡಿಸಿ, ಅವರ ಪರ ಪ್ರಚಾರ ನಡೆಸುವುದಾಗಿ ಸುದೀಪ್ ಹೇಳಿದ್ದರು. ಇಂದು ಸಿಎಂ ನಾಮಪತ್ರ ಸಲ್ಲಿಕೆ ವೇಳೆ ನಡೆಯಲಿರುವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಅಧಿಕೃತವಾಗಿ ಸಿಎಂ ಬೊಮ್ಮಾಯಿ ಪರ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ.
ಬೊಮ್ಮಾಯಿಗೆ ಕಠಿಣ ಸವಾಲು ಎದುರಾಗಲಿದೆ ಎನ್ನುವ ಸ್ಥಿತಿ ಇದ್ದು, ಪ್ರತಿಪಕ್ಷಗಳು ಸಿಎಂ ಬೊಮ್ಮಾಯಿ ಅವರನ್ನು ಶಿಗ್ಗಾಂವಿಯಲ್ಲಿಯೇ ಕಟ್ಟಿಹಾಕಬೇಕು ಎನ್ನುವ ತಂತ್ರಗಾರಿಕೆ ಹೆಣೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿಎಂ ಬೊಮ್ಮಾಯಿ ನಟ ಸುದೀಪ್ ಅವರನ್ನು ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳಲಿದ್ದಾರೆ. ಇನ್ನು ಪಕ್ಷದ ಜಿಲ್ಲೆಯ ಪ್ರಭಾವಿ ನಾಯಕ ಜಗದೀಶ್ ಶೆಟ್ಟರ್ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದು, ಆ ಕ್ಷೇತ್ರದಲ್ಲಿಯೂ ಸುದೀಪ್ ಅವರನ್ನು ಕರೆದೊಯ್ದು ಪ್ರಚಾರ ಕಾರ್ಯ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ನಾಳೆ ಸಿಎಂ ಬೊಮ್ಮಾಯಿ ನಾಮಪತ್ರ ಸಲ್ಲಿಕೆ: ಬೃಹತ್ ರ‍್ಯಾಲಿಯಲ್ಲಿ ಕಿಚ್ಚ ಸುದೀಪ್ ಭಾಗಿ