ಹಾವೇರಿ: ನಾನು ಅಧಿಕಾರದ ರಾಜಕಾರಣ ಮಾಡಲ್ಲ. ಬದಲಿಗೆ ಜನರ ರಾಜಕಾರಣ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಿಮ್ಮ ಪ್ರೀತಿ ವಿಶ್ವಾಸದಿಂದ ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಜನರ ಸೇವೆ ಮಾಡುತ್ತಿದ್ದೇನೆ. ಮುಂದಿನ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ದೊಡ್ಡ ಬದಲಾವಣೆ ತರುವ ಸಂಕಲ್ಪ ಮಾಡಿದ್ದೇನೆ ಎಂದರು.
ನಮ್ಮ ಅಧಿಕಾರಾವಧಿಯಲ್ಲಿ ಘೋಷಣೆಯಾಗಿರುವ ಮನೆಗಳನ್ನು ನಮ್ಮ ಅವಧಿಯಲ್ಲೆ ಪೂರ್ಣಗೊಳಿಸಲು ನಾನು ತೀರ್ಮಾನ ಮಾಡಿದ್ದೇನೆ. ಈ ಕಾರ್ಯ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ನುಡಿದಂತೆ ನಡೆಯುವುದು ನಮ್ಮ ಉದ್ದೇಶವಾಗಿದೆ. ಹಾಗಾಗಿ ನಮ್ಮ ಅವಧಿಯಲ್ಲೆ 5 ಲಕ್ಷ ಮನೆಗಳನ್ನು ನಿರ್ಮಾಣ ಮಾಡುತ್ತೇವೆ. ಮುಂದಿನ 15 ತಿಂಗಳೂ ಕೇವಲ ಜನರ ರಾಜಕಾರಣ ಮಾಡುತ್ತೇನೆ ಹೊರತು ಅಧಿಕಾರದ ರಾಜಕಾರಣ ಮಾಡುವುದಿಲ್ಲ ಎಂದು ಪುನರ್ ಉಚ್ಚರಿಸಿದರು.
ಅಧಿಕಾರಿದಲ್ಲಿ ಇದ್ದಷ್ಟು ದಿನ ಜನರ ಸೇವೆ ಮಾಡಿ ಅವರ ಪ್ರೀತಿ ವಿಶ್ವಾಸ ಗಳಿಸಿ ಮತ್ತೊಮ್ಮೆ ನಾವು ಮಾಡಿದ ಅಭಿವೃದ್ಧಿ ಕೆಲಸಗಳನ್ನು 2023ರಲ್ಲಿ ಮುಂದಿಟ್ಟು ನಿಮ್ಮ ಬಳಿ ಮತಯಾಚನೆ ಮಾಡುತ್ತೇವೆ. ಮುಂದಿನ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಕ್ರಾಂತಿ ತರುವ ಕೆಲಸ ಮಾಡುವುದಾಗಿ ಹೇಳಿದರು.
ನೇಕಾರರ ತಯಾರಿಸುವ ವಸ್ತುಗಳಿಗೆ ಮಾರುಕಟ್ಟೆ ಒದಗಿಸಲು ಈಗಾಗಲೇ ಅಮೆಜಾನ್ ಮತ್ತು ಪ್ಲಿಪಕಾರ್ಟ್ ಸೇರಿದಂತೆ ವಿವಿಧ ಕಂಪನಿಗಳ ಜೊತೆ ಮಾತುಕತೆ ನಡೆದಿದೆ. ರಾಜ್ಯದಲ್ಲಿನ ಶಾಸಕರು, ಸಚಿವರ ವಿಶ್ವಾಸ ತೆಗೆದುಕೊಂಡು ಒಂದಾಗಿ ಕೆಲಸ ಮಾಡಿ ಹೊಸ ಚಿಂತನೆಯ ಕಾರ್ಯಕ್ರಮ ರೂಪಿಸುತ್ತೇವೆ. ಸರ್ಕಾರದ ಮುಂದೆ ಹಲವಾರು ಸವಾಲುಗಳಿವೆ. ಅದರಲ್ಲಿ ಒಮಿಕ್ರಾನ್ ಸಹ ಒಂದಾಗಿದ್ದು, ಅದನ್ನು ಸಹ ಸಮರ್ಥವಾಗಿ ನಿಭಾಯಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ರೈತರ ಮಕ್ಕಳಿಗಾಗಿ ಜಾರಿಗೆ ತಂದಿರುವ ವಿದ್ಯಾನಿಧಿ ಕಾರ್ಯಕ್ರಮವನ್ನು ಗ್ರಾಮೀಣ ಭಾಗದ ರೈತರ ಹೆಣ್ಣುಮಕ್ಕಳಿಗೆ ಸಹ ವಿಸ್ತರಣೆ ಮಾಡುವುದಾಗಿ ಸಿಎಂ ತಿಳಿಸಿದರು.
ಇದನ್ನೂ ಓದಿ: ಕರ್ನಾಟಕ ಬಂದ್ನಿಂದ ಯಾರಿಗೆ ಅನಾನುಕೂಲ: ಹೆಚ್ಡಿಕೆ ಪ್ರಶ್ನೆ