ಹಾವೇರಿ: "ಅಹಿಂಸಾ ಪರಮೋ ಧರ್ಮ ಎಂಬ ಮಹೋನ್ನತ ಸಂದೇಶ ಸಾರುವ ಜೈನ ಧರ್ಮವನ್ನು ಎಲ್ಲರೂ ಪಾಲಿಸಿದ್ದರೆ ಜಗತ್ತಿನಲ್ಲಿ ಹಿಂಸೆ ಎಂಬುದೇ ಇರುತ್ತಿರಲಿಲ್ಲ. ಧರ್ಮ ಉಳಿದರೆ ಮಾನವೀಯತೆ ಉಳಿಯುತ್ತದೆ. ಮಾನವೀಯತೆ ಉಳಿದರೆ ಮನುಷ್ಯತ್ವ ಉಳಿಯುತ್ತದೆ. ಇದರಿಂದ ಮುಂದಿನ ಜನಾಂಗಕ್ಕೆ ಪ್ರೇರಣೆಯಾಗುತ್ತದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಅರಟಾಳ ಗ್ರಾಮದ ಸುಕ್ಷೇತ್ರದಲ್ಲಿ ಮಂಗಳವಾರ 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಯಾತ್ರಿ ನಿವಾಸ ಕಟ್ಟಡ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, "ಅರಟಾಳ ಒಂದು ಪುಣ್ಯ ಕ್ಷೇತ್ರ. ಶ್ರವಣಬೆಳಗೊಳಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಜೈನ ಮುನಿಗಳು ಮತ್ತು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಿದ್ದರು" ಎಂದು ತಿಳಿಸಿದರು.
ಇದನ್ನೂ ಓದಿ: ಹಂಪಿ ಜೈನ ಸ್ಮಾರಕದ ಮೇಲೇರಿ ಕುಣಿದ ಮಂಡ್ಯದ ಯುವಕ: ಪ್ರಕರಣ ದಾಖಲಾಗುತ್ತಿದ್ದಂತೆ ಕ್ಷಮೆ ಯಾಚನೆ
"ಜೈನ ಧರ್ಮವನ್ನು ಎಲ್ಲರೂ ಪಾಲಿಸಿದರೆ ಸ್ವರ್ಗ ಲಭಿಸುತ್ತದೆ. 1008 ಪಾರ್ಶ್ವನಾಥರ ಆಶೀರ್ವಾದದಿಂದ ಈ ದೇವಸ್ಥಾನ ಸೂರ್ಯ ಗ್ರಹಣವಿರುವ ದಿನ ಪ್ರಾರಂಭವಾಗಿರುವುದು ವಿಶೇಷವಾಗಿದೆ. ಈ ತರಹದ ದೇವಸ್ಥಾನ ಮತ್ತೊಂದಿಲ್ಲ. ಜೈನ ಧರ್ಮ ಬಹಳ ವಿಶೇಷವಾಗಿರುವ ಧರ್ಮ. ಬಹುತೇಕವಾಗಿ ನಾವೆಲ್ಲರೂ ಈ ಧರ್ಮವನ್ನು ಆಚರಿಸಿದರೆ ಜಗತ್ತಿನಲ್ಲಿ ಹಿಂಸೆಯೇ ಇರುತ್ತಿರಲಿಲ್ಲ. ಆದ್ರೆ, ಇವತ್ತಿನ ಕಾಲಮಾನದಲ್ಲಿ ಅದು ಬಹಳ ಕಷ್ಟ" ಎಂದರು.
ಇದನ್ನೂ ಓದಿ: ತುಮಕೂರು ಜೈನ ಕ್ಷೇತ್ರ ಮಂದರಗಿರಿಯಲ್ಲಿ ಸಮವಶರಣ ನಿರ್ಮಾಣ... ಮಾರ್ಚ್ 8ರಿಂದ ಪಂಚಕಲ್ಯಾಣ ಪ್ರತಿಷ್ಟಾ ಮಹೋತ್ಸವ
ಇತರೆ ಧರ್ಮಗಳು ನಶಿಸಿ ಹೋಗುವ ಸಂದರ್ಭದಲ್ಲಿ ಜೈನ ಧರ್ಮ ಆರಂಭವಾಗಿದೆ. ಧರ್ಮದಿಂದ ಮಾನವೀಯ ಮೌಲ್ಯಗಳು ಉಳಿಯುವುದರ ಜೊತೆಗೆ ನಂಬಿಕೆ ಇಡುವ ಕೆಲಸವನ್ನು ಎಲ್ಲ ತೀರ್ಥಂಕರರು ಮಾಡಿದ್ದಾರೆ. ಜೈನ ಧರ್ಮೀಯರು ತಮ್ಮ ದುಡಿಮೆಯಲ್ಲಿ ಬಹಳ ಯಶಸ್ಸು ಕಾಣುತ್ತಾರೆ. ದುಡಿದಿರುವುದರಲ್ಲಿ ಒಂದು ಭಾಗವನ್ನು ಧರ್ಮದ ಕಾರ್ಯ, ಪರೋಪಕಾರ ಕಾರ್ಯಕ್ಕೆ ಕೊಡುವ ವಿಶೇಷ ಗುಣ ಈ ಧರ್ಮದಲ್ಲಿದೆ" ಎಂದು ಸಿಎಂ ಮೆಚ್ಚುಗೆ ಗಳಿಸಿದರು.
"ಹಿಂದೂ, ಬೌದ್ದ, ಸಿಖ್, ಜೈನ ಧರ್ಮಗಳು ಹುಟ್ಟಿರುವುದೇ ಭಾರತದಲ್ಲಿ. ಜೈನ ಧರ್ಮ ಅತ್ಯಂತ ಪವಿತ್ರವಾಗಿದ್ದು, ಸಣ್ಣ ಕೀಟಗಳನ್ನೂ ನಾಶ ಮಾಡಬಾರದು ಎಂದು ಭಾವಿಸಲಾಗುತ್ತದೆ. ಎಲ್ಲಿ ಅಹಿಂಸೆ ಇದೆಯೋ ಅಲ್ಲಿ ಪಾವಿತ್ರ್ಯತೆ ಮತ್ತು ಪುಣ್ಯವಿದೆ. ಪುಣ್ಯವಿದ್ದಲ್ಲಿ ಸ್ವರ್ಗ ಇದೆ. ಭಗವಾನ್ ಮಹಾವೀರರು ನಮಗೆ ಸ್ಪೂರ್ತಿ ಮತ್ತು ಪ್ರೇರಣೆ" ಎಂದರು.
ಇದನ್ನೂ ಓದಿ: ಜೈನ ಸಮಾಜದ ವತಿಯಿಂದ ಮೌನ ಪ್ರತಿಭಟನಾ ಮೆರವಣಿಗೆ: ಮಹೇಂದ್ರ ಸಿಂಘಿ
"ನಮ್ಮ ತಂದೆ-ತಾಯಿಯವರು ಹುಟ್ಟಿದ ಊರು ಇದು. ನಮ್ಮ ಬೇರು ಇಲ್ಲಿದೆ" ಎಂದು ಹಳೆಯ ನೆನಪುಗಳನ್ನು ಎಂದು ಇದೇ ಸಂದರ್ಭದಲ್ಲಿ ಮೆಲುಕು ಹಾಕಿದರು. ಕಾರ್ಯಕ್ರಮದಲ್ಲಿ ಮುನಿಶ್ರೀ 1008 ಪುಣ್ಯಸಾಗರ ಮಹಾರಾಜರು, ಅಕ್ಕಿ ಆಲೂರು ಭಟ್ಟಾರಕ ಮಹಾಸ್ವಾಮೀಜಿ, ಕುಮಾರ ಮಹಾಸ್ವಾಮೀಜಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಜೈನರದ್ದು ಅತ್ಯಂತ ಪವಿತ್ರವಾದ ಧರ್ಮ: ಸಿಎಂ ಬಸವರಾಜ ಬೊಮ್ಮಾಯಿ