ಹಾವೇರಿ: ಹೊಗಳಿ ಹೊಗಳಿ ಹೊನ್ನಶೂಲಕ್ಕೆ ಎನ್ನ ಏರಿಸದಿರಿ ಎಂದು ಸ್ವತಃ ಬಸವಣ್ಣನವರೇ ಹೇಳಿದ್ದಾರೆ. ನಾನು ಯಾವುದಕ್ಕಾದ್ರೂ ಹೆದುರುತ್ತೇನೆ ಎಂದರೆ ಅದು ಹೊಗಳಿಕೆಗೆ ಮಾತ್ರ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹಾವೇರಿಯಲ್ಲಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಬಿ ಟಿ ಪಾಟೀಲ ಮೈದಾನದಲ್ಲಿ ಶಾಸಕ ಅರುಣಕುಮಾರ ಪೂಜಾರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾದರು. ಬಳಿಕ ಮಾತನಾಡಿದ ಅವರು, ಯಾರಾದರೂ ಹೊಗಳಿದರೆ ಹೆದರುವ ನಾನು, ತೆಗಳಿದರೆ, ಟೀಕೆ ಮಾಡಿದ್ರೆ ಅದಕ್ಕೆ ನನ್ನ ಕೆಲಸದ ಮೂಲಕ ಉತ್ತರ ನೀಡುತ್ತೇನೆ ಎಂದು ತಿಳಿಸಿದರು.
ರಾಣೆಬೆನ್ನೂರು ನನ್ನ ರಾಜಕೀಯ ಜೀವನದಲ್ಲಿ ಅತಿ ಹೆಚ್ಚು ಆತ್ಮೀಯತೆ ತುಂಬಿದ ಕ್ಷೇತ್ರ. ಶಿಗ್ಗಾಂವಿ ಸವಣೂರು ಕ್ಷೇತ್ರದ ಜನ ನನ್ನ ತಂದೆ ತಾಯಿ ಇದ್ದಂತೆ. ಸಿಎಂ ಆದ್ಮೇಲೆ ನಾನು ಕ್ಷೇತ್ರಕ್ಕೆ ಹೆಚ್ಚು ಹೋಗಲು ಸಾಧ್ಯವಾಗಿಲ್ಲ. ಆದರೆ ಹೋದಾಗಲೆಲ್ಲಾ ಜನ ನನಗೆ ಪ್ರೀತಿ ವಿಶ್ವಾಸ ಕೊಟ್ಟಿದ್ದಾರೆ. ರಾಣೆಬೆನ್ನೂರು ಕ್ಷೇತ್ರದಲ್ಲಿ ಬಹಳ ತುರಿಸಿನ ರಾಜಕಾರಣವಿದೆ. ಯಾಕೆಂದರೆ ಇದು ಬಹಳ ದೊಡ್ಡವರ ಕ್ಷೇತ್ರ. ಆದರೆ ಈಗ ಕಾಲ ಬದಲಾಗಿದೆ. ಮೊದಲಿನಂತೆ ಇಲ್ಲ ಎಂದು ಸಿಎಂ ಹೇಳಿದರು.
ಇದನ್ನೂ ಓದಿ: ಮಹಮ್ಮದ್ ಅಲಿ ಜಿನ್ನಾ ಎಂದರೆ ಕಾಂಗ್ರೆಸ್ನವರಿಗೆ ಬಹಳ ಪ್ರೀತಿ: ಸಿಎಂ ಬೊಮ್ಮಾಯಿ ಟೀಕೆ
ಯುವಕರು ಬದಲಾವಣೆ ನೋಡಿದ್ದಾರೆ. ಅರುಣಕುಮಾರ್ ಉಡದ ರೀತಿ ಗಟ್ಟಿಯಾಗಿ ಹಿಡಿದುಕೊಂಡು ನಿಮ್ಮ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾನೆ. ಅರುಣಕುಮಾರ್ ನಿಮ್ಮ ಕೈ ಬಿಡಲ್ಲ. ಇವನ ಮೇಲೆ ನಂಬಿಕೆ ಇದೆ. ನೀವು ಸಹ ಇವನ ಕೈಬಿಡಬೇಡಿ ಎಂದರು.
ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬೊಮ್ಮಾಯಿ, ಸಾಮಾಜಿಕ ನ್ಯಾಯ ಅಂದರು. ಆದರೆ ಯಾರಿಗೆ ಕೊಟ್ಟರು. ರೈತರಿಗೆ, ಮಹಿಳೆಯರಿಗೆ, ಯುವಕರಿಗೆ ಕೆಲಸ ಕೊಟ್ಟರಾ?. ನಿಜವಾದ ಸಾಮಾಜಿಕ ನ್ಯಾಯ ಕೊಡುತ್ತಿರುವುದು ಮೋದಿ ಸರ್ಕಾರ. ನಾವು ಮಾಡಿದ ಕಾರ್ಯಕ್ರಮಗಳು, ನೀವು ಮಾಡಿದ ಕಾರ್ಯಕ್ರಮಗಳನ್ನು ಜನರ ಮುಂದೆ ಇಡೋಣ. ಜನರು ತೀರ್ಮಾನ ಮಾಡುತ್ತಾರೆ ಎಂದು ಸವಾಲ್ ಹಾಕಿದರು.